ಬಾಗೀನ ಅರ್ಪಿಸಿದರೆ ಸಾಲದುಸಮಾನಂತರ ಜಲಾಶಯವಾಗಬೇಕು
ಎನ್.ವೀರಭದ್ರಗೌಡ
ಬಳ್ಳಾರಿ, ಸೆ.22: ತುಂಗಭದ್ರ ಡ್ಯಾಂ ತುಂಬಿದೆಂದು ಬಾಗೀನ ಅರ್ಪಿಸಿದರೆ ಸಾಲದು. 30 ಟಿಎಂಸಿಗೂ ಹೆಚ್ಚು ಹೂಳಿನ ಸಮಸ್ಯೆಗೆ ಪರಿಹಾರ ಸಮಾನಾಂತರ ಜಲಾಶಯದ ಕೆಲಸ ಆಗಬೇಕಿದೆ.
ಜಲಾಶಯ ಭರ್ತಿಯಾಗುವ ವೇಳೆ ಡ್ಯಾಂನ 19 ನೇ ಗೇಟ್ ಮುರಿದಿತ್ತು. ಅದನ್ನು ಸ್ಟಾಪ್ ಲಾಕರ್ ಗೇಟ್ ಅಳವಡಿಸುವ ಮೂಲಕ ಅರ್ಧ ಖಾಲಿಯಾಗುತ್ತಿದ್ದ ಡ್ಯಾಂನ ನೀರಿನ ಸಂಗ್ರಹವನ್ನು ಮತ್ತೆ ತುಂಬುವಂತೆ ಮಾಡಿದೆ.
ಈ ಹಿನ್ನಲೆಯಲ್ಲಿ ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ , ಉಪ‌ಮುಖ್ಯ ಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರ ಸಚಿವರು ಡ್ಯಾಂಗೆ ಬಾಗೀನ ಅರ್ಪಿಸಿದರು. ಅಷ್ಟೇ ಅಲ್ಲದೆ 19 ಗೇಟ್ ಗೆ ಸ್ಟಾಪರ್ ಲಾಕ್ ಗೇಟ್ ಅಳವಡಿಸಲು ಶ್ರಮಿಸಿದ ಇಂಜಿನೀಯರ್ಸ್ ಮತ್ತಿತರ ಸಿಬ್ಬಂದಿ ಹಾಗು ನೆರವಾದವರಿಗೆ ಸನ್ಮಾನ ಸಹ ಮಾಡಲಾಯ್ತು‌.
ಪ್ರತಿವರ್ಷ ಡ್ಯಾಂ ತುಂಬಿದಾಗಲೆಲ್ಲ ಸಚಿವರುಗಳು ಬಂದು ಬಾಗೀನ ಅರ್ಪಿಸುವುದು ವಾಡಿಕೆಯಾಗಿದೆ. ಇದರಿಂದ ರೈತರು ಎದಿರಿಸುತ್ತಿರುವ ಡ್ಯಾಂನಲ್ಲಿನ 30 ಟಿಎಂಸಿಯಷ್ಟು ಹೂಳಿನ ಸಮಸ್ಯೆಗೆ ಪರಿಹಾರ ಕಾರ್ಯಕ್ಕೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಹೂಳಿನಿಂದಾಗಿ ಬೇಸಿಗೆಯ ಎರಡನೇ  ಬೆಳೆಗೆ ಅಗತ್ಯ ನೀರು ದೊರೆಯುತ್ತಿಲ್ಲ. ಅಷ್ಟೇ ಅಲ್ಲದೆ ಬಲದಂಡೆಯ ಹೆಚ್ ಎಲ್ ಸಿ ಕಾಲುವೆಯ ರೈತರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದಿರಾಗುತ್ತಿದೆ.
ಹೂಳಿನಿಂದ ಮಳೆಗಾಲದಲ್ಲಿ ಡ್ಯಾಂತುಂಬಿ‌ ನೂರಾರು ಟಿಎಂಸಿ ನೀರು ಆಂದ್ರಕ್ಕೆ  ಹರಿದು ಹೋಗುತ್ತಿದೆ.  ಈ‌ನೀರನ್ನು ಸಮಾನಾಂತರ ಜಲಾಶಯ ನಿರ್ಮಿಸಿ ಹಿಡಿದಿಟ್ಟುಕೊಳ್ಳುವ ಕೆಲಸ ಆಗಬೇಕಿದೆ.
ಆದರೆ ಈ ಮಾತು‌ಕಳೆದ ಎರೆಡುವರೆ  ದಶಕಗಳಿಂದ ಕೇಳಿ ಬರುತ್ತಿದೆ ಹೊರತು ಅನುಷ್ಟಾನಕ್ಕೆ ಬರುತ್ತಿಲ್ಲ. ಇದಕ್ಕಾಗಿ ಡ್ಯಾಂನ‌ ಪಾಲುದಾರ ರಾಜ್ಯಗಳ‌
ಜೊತೆ ಮಾತುಕತೆ ಆಗಿಲ್ಲ.
ಈ ಹಿಂದೆ ಜೆ.ಹೆಚ್.ಪಟೇಲ್, ಎಂ.ಪಿ.ಪ್ರಕಾಶ್. ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಅಲ್ಲಂ ವೀರಭದ್ರಪ್ಪ, ಹೆಚ್.ಕೆ.ಪಾಟೀಲ್, ಸೇರಿದಂತೆ ಈಗಿನ ಸಿಎಂ.ಡಿಸಿಂ, ಸಚಿವ ತಂಗಡಿ ಆದಿಯಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲಿದೆ. ಸರ್ವೇ ಕಾರ್ಯ, ಡಿಪಿ ಆರ್ ಮಾಡಲು ಹಣ ನೀಡುದೆ ಎನ್ನುತ್ತಾರೆ ಸಚಿವರು, ಸಿಎಂ ಆದರೆ ಅದು ಕಾಗದದ ಮೇಲೆ ಮಾತ್ರ ಬಂದಿಲ್ಲ. ಬರೀ ಬಾಯಿ‌ಮಾತಾಗಿದೆ.
ಬಾಗೀನ ಅರ್ಪಿಸಿದಾಗ ಒಮ್ಮೆ ಆಯ್ತು ನಾವು ಸಮಾನಾಂತರ ಜಲಾಶಯ ಮಾಡುತ್ತೇವೆ, ಮಾತುಕೊಟ್ಟಂತೆ ನಡೆದುಕೊಳ್ಳುತ್ತೇವೆ ಎಂದು ಹೋದವರು ಮತ್ತೆ ಬಾಗಿನ ಅರ್ಪಿಸಲು ಬಂದಾಗ ಅದೇ ಮಾತುಗಳನ್ನು ಕೇಳಿ ರೈತರಿಗೆ ಬೇಸರದ ಸಂಗತಿಯಾಗಿದೆ.
ಈಗಲಾದರು ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರು ಕಠಿಣ ನಿರ್ಧಾರ ತೆಗೆದುಕೊಂಡು ಬ್ಯಾಲೆನ್ಸಿಂಗ್ ರಿಜರ್ವಯರ್ ನಿರ್ಮಿಸುವರೇ ಎಂಬ ಪ್ರಶ್ನೆ ಜನರದ್ದಾಗಿದೆ.

ಡ್ಯಾಂನ ಗೇಟ್ ಸರಿಪಡಿಸಿದವರಿಗೆ ಧನ್ಯವಾದಗಳು ಜೊತೆಗೆ ಹೂಳಿನ ಸಮಸ್ಯೆಗೆ ಸಹ ಪರಿಹಾರ ಆಗಬೇಕು. ಸಮಾನಾಂತರ ಜಲಾಶಯ ಆಗಬೇಕು.
ದರೂರು ಪುರುಷೋತ್ತಮಗೌಡ
ಅಧ್ಯಕ್ಷರು, ತುಂಗಭದ್ರ ರೈತ ಸಂಘ.
ಯಾರು ಏನೇ ಮಾಡಲಿ, ಡ್ಯಾಂ ತುಂಬಿದೆಂದು ಪೂಜೆ ಮಾಡಿದರೆ ನಮಗೇನು ಸಹಕಾರ. ಮೊದಲು ರೈತರ ಪರವಾದ ಸರ್ಕಾರವಾದರೆ ಡ್ಯಾಂನ ಹೂಳು ತೆಗೆಯಲಿ, ಇಲ್ಲ ಬ್ಯಾಲೆನ್ಸಿಂಗ್ ಡ್ಯಾಂ ಕಟ್ಟಲಿ.
ಪಕ್ಕೀರಪ್ಪ, ಸಿಂದಿಗೇರಿ