ಬ್ರಾಹ್ಮಣ ಸಮಾಜದ ಅವಹೇಳನ ಸಹಿಸುವುದಿಲ್ಲ
ಬೀದರ್:ಮೇ.8:ಬ್ರಾಹ್ಮಣರ ಬಗ್ಗೆ ಕೆಲವರು ಅನಗತ್ಯವಾಗಿ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಅವಹೇಳನಕಾರಿ ಪದಗಳನ್ನು ಬಳಸಿ ಸಮಾಜದ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ವಿನಾಕಾರಣ ಸಮಾಜದ ವಿರುದ್ಧ ಹೇಳಿಕೆ ಕೊಡುವವರಿಗೆ ತಕ್ಕ ಪಾಠ ಕಲಿಸಲು, ಕಾನೂನಾತ್ಮಕ ಸೇರಿದಂತೆ ಬೀದಿಗಿಳಿದು ಸಹ ಹೋರಾಟ ಮಾಡುವುದಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಜಿಲ್ಲಾ ಘಟಕ ನಿರ್ಧರಿಸಿದೆ.
ಶನಿವಾರ ನಗರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೂತನ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಸಮಾಜ ಬಾಂಧವರ ಸಮಾಲೋಚನಾ ಸಭೆ ಜರುಗಿತು. ಬ್ರಾಹ್ಮಣರ ಕುರಿತು ಕೆಲವರು ನಿರಂತರವಾಗಿ ಮಾಡುತ್ತಿರುವ ಅರ್ಥಹೀನ ಟೀಕೆಗಳ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ವೇದಿಕೆ ಸಿಕ್ಕರೆ ಕೆಲವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡುವ, ನಿಂದಿಸುವ ಕೆಟ್ಟ ಚಾಳಿ ಹಾಕಿಕೊಂಡಿದ್ದಾರೆ. ಇಂಥವರಿಗೆ ಪಾಠ ಕಲಿಸಲು ಮಹಾಸಂಘದ ಸಾರಥ್ಯದಲ್ಲಿ ಸೈದ್ಧಾಂತಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಮೇಶ ಕುಲಕರ್ಣಿ, ಬ್ರಾಹ್ಮಣ ಮಹಾಸಂಘದ ಸಂಘಟನೆ ಜಿಲ್ಲೆಯಲ್ಲಿ ತಳಮಟ್ಟದಿಂದ ಬಲಪಡಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರವೇ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಬಳಿಕ ಎಲ್ಲ ತಾಲೂಕು ಘಟಕ ರಚಿಸಿ, ನಂತರ ಹೋಬಳಿ ಮಟ್ಟಕ್ಕೂ ಸಂಘಟನೆ ವಿಸ್ತರಿಸಲಾಗುವುದು. ಬ್ರಾಹ್ಮಣ ಸಮಾಜದಲ್ಲಿ ಸಂಘಟನೆಯ ಕೊರತೆ ಇದೆ. ಇದನ್ನು ನಿವಾರಿಸಿ, ಬ್ರಾಹ್ಮಣರು ಸಹ ಒಗ್ಗಟ್ಟಾಗಿ ತಮ್ಮ ಶಕ್ತಿ, ಸಾಮಥ್ರ್ಯ ಏನಿದೆ ಎಂಬುದನ್ನು ತೋರಿಸಿಕೊಡುವುದು ನನ್ನ ಉದ್ದೇಶ. ಸಮಾಜದ ಎಲ್ಲರ ಸಹಕಾರ, ಸಹಭಾಗಿತ್ವವಿದ್ದರೆ ಇದನ್ನು ಸಾಧಿಸಿ ತೋರಿಸುವುದಾಗಿ ಭರವಸೆ ನೀಡಿದರು.
ಬ್ರಾಹ್ಮಣ ಸಮಾಜ ಒಗ್ಗಟ್ಟಾಗದ ಕಾರಣದಿಂದಾಗಿ ಎಲ್ಲ ಪಕ್ಷದವರು ನಮ್ಮನ್ನು ಬಳಸಿ ಬೀಸಾಡುವ (ಯೂಜ್ ಆ್ಯಂಡ್ ಥ್ರೋ) ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ನಾವು ಬೇಕು, ಆದರೆ ಸ್ಥಾನಮಾನ ಕೊಡುವಾಗ ನಾವು ಬೇಡವಾಗಿದ್ದೇವೆ. ಕಳೆದ ಎರಡ್ಮೂರು ದಶಕಗಳಿಂದ ಜಿಲ್ಲೆಯಲ್ಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯವೇ ಯಾರೂ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ ಸರ್ಕಾರ 100 ಕೋಟಿ ರೂ.ಅನುದಾನ ಕಲ್ಪಿಸಿ, ಸಮಾಜದವರ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಕಾಲಮಿತಿ ಯೋಜನೆ ಹಾಕಿಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ನಿಗಮದ ಪ್ರತ್ಯೇಕ ಕಚೇರಿ, ಅಧಿಕಾರಿಗೆ ನಿಯೋಜಿಸಿ ವಿವಿಧ ಯೋಜನೆಗಳ ಲಾಭ ಸಮಾಜದವರಿಗೆ ಮುಟ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ನರೇಶ ಪಾಠಕ್ ಮಾತನಾಡಿ, ನಮ್ಮ ಸಂಘಟನೆ ಶೂನ್ಯಕ್ಕೆ ಸಮಾನವಿರುವ ಕಾರಣ ಸಿಕ್ಕಸಿಕ್ಕವರು ಸಮಾಜಕ್ಕೆ ಟೀಕಿಸುವ ಮಟ್ಟಕ್ಕೆ ಬಂದಿದ್ದಾರೆ. ನಾವು ಒಗ್ಗಟ್ಟು ಪ್ರದರ್ಶಿಸಿ, ವಿನಾಕಾರಣ ನಮ್ಮನ್ನು ನಿಂದಿಸಿ ಸಮಾಜದ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯ. ಒಂದು ಸಮಾಜಕ್ಕೆ ತುಚ್ಛವಾಗಿ ಕಂಡು ಟೀಕಿಸಿ ಹೀಯಾಳಿಸುವುದು, ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಕ್ಕು ಸಂವಿಧಾನವು ಯಾರಿಗೂ ನೀಡಿಲ್ಲ. ಇದನ್ನು ಅರಿತು ಟೀಕೆ ಮಾಡುವವರು ಮಾತನಾಡಲಿ ಎಂದು ಸಲಹೆ ನೀಡಿದರು.
ಸಮಾಜದ ಪ್ರಮುಖರಾದ ಚಂದ್ರಕಾಂತ ಕುಲಕರ್ಣಿ, ಹೇಮಲತಾ ಜೋಶಿ, ರಾಜೇಶ ಕುಲಕರ್ಣಿ, ಡಾ.ಮಹೇಶ ಪತಗಿ, ಗೋಪಾಲ ಕುಲಕರ್ಣಿ, ಮಾಣಿಕರಾವ ಕುಲಕರ್ಣಿ, ಉಮೇಶ ಕುಲಕರ್ಣಿ ತಾಳಮಡಗಿ, ಸತೀಶ ಕುಲಕರ್ಣಿ ಕೊಳಾರ್, ಸುನೀಲ ಪಾಟೀಲ್, ಪ್ರಭಾಕರ ಕುಲಕರ್ಣಿ, ದಿನಕರ ಕುಲಕರ್ಣಿ ಇತರರು ಮಾತನಾಡಿ, ಬ್ರಾಹ್ಮಣ ಮಹಾಸಂಘಕ್ಕೆ ಶಕ್ತಿ ತುಂಬಲು ಎಲ್ಲರೂ ಒಂದಾಗುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ. ಉತ್ತಮ ವ್ಯಕ್ತಿತ್ವ, ಸಮಾಜಪರ ಚಿಂತನೆಯುಳ್ಳ ರಮೇಶ ಕುಲಕರ್ಣಿ ನೇತೃತ್ವದಲ್ಲಿ ಬೀದರ್ ಸಂಘ ರಾಜ್ಯದಲ್ಲೇ ಮಾದರಿಯಾಗಿ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು. ಸಮಾಜದ ಎಲ್ಲರೂ ಸಂಘ ಹಾಗೂ ಸಂಘಟನೆಗೆ ತಿಂಗಳಲ್ಲಿ ಒಂದೆರಡು ದಿನವನ್ನು ಮೀಸಲಿಡಬೇಕೆಂದು ಮನವಿ ಮಾಡಿದರು. ನಾವು ಒಂದಾದರೆ ಸಮಾಜದಲ್ಲಿ ಹೊಸ ಸಂಚಲನವುಂಟಾಗಿ ಪರಿವರ್ತನೆ ನಾಂದಿ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯಲ್ಲಿ ಬ್ರಾಹ್ಮಣರು 40 ಸಾವಿರ ಮತದಾರರಿದ್ದೇವೆ. ಆದರೆ ಸಂಘಟನೆ ಬಲ ಪ್ರದರ್ಶಿಸದ ಕಾರಣಕ್ಕೆ ಎಲ್ಲ ಪಕ್ಷದವರು ಕಡೆಗಣಿಸುತ್ತಿದ್ದಾರೆ. ನಾವು ಒಗ್ಗಟ್ಟನ್ನು ಪ್ರದರ್ಶಿಸಿದಾಗಲೇ ಪ್ರಾತಿನಿಧ್ಯ, ಸ್ಥಾನಗಳು ಹುಡುಕಿಕೊಂಡು ಬರುತ್ತವೆ. ರಾಜ್ಯ ಸರ್ಕಾರದಿಂದ ಪರಶುರಾಮ ಜಯಂತಿ ಆಚರಣೆ, ಸಮಾಜದ ವಿವಿಧ ಬೇಡಿಕೆ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ.
-ರಮೇಶ ಕುಲಕರ್ಣಿ
ಸಂಘಟನೆಯೇ ದೊಡ್ಡ ಶಕ್ತಿ. ಸಮಾಜ ಮತ್ತು ರಾಜಕೀಯದಲ್ಲಿ ನಮ್ಮ ಶಕ್ತಿ, ಸಾಮಥ್ರ್ಯ, ಸ್ವಂತಿಕೆ ಸಾಬೀತುಪಡಿಸಬೇಕಾದರೆ ಒಗ್ಗಟ್ಟು ಅನಿವಾರ್ಯ. ಬ್ರಾಹ್ಮಣರ ಬಗ್ಗೆ ಕೆಲವರು ಅನಗತ್ಯ ನಿಂದನೆ ಮಾಡಲು ನಮ್ಮ ಸಂಘಟನೆ ಕೊರತೆ ಪ್ರಮುಖ ಕಾರಣವಾಗಿದೆ. ಶಾಂತಿ, ಸಹನೆ, ತಾಳ್ಮೆಯೇ ನಮ್ಮ ದೌರ್ಬಲ್ಯ ಆಗಬಾರದು. ನಮಗೆ ಜಾÐನದ ಬಲವಿದೆ.ಇದರೊಟ್ಟಿಗೆ ಸಂಘಟನಾ ಬಲವೂ ಸೇರಿದರೆ ನಮ್ಮನ್ನು ಸೋಕಾಲ್ಡ್ ಬುದ್ಧಿಜೀವಿ, ಪ್ರಗತಿಪರರು ಸೇರಿದಂತೆ ಯಾರೊಬ್ಬರೂ ವಿನಾಕಾರಣ ನಿಂದಿಸುವ ಧೈರ್ಯ ತೋರಿಸುವುದಿಲ್ಲ.
-ಸದಾನಂದ ಜೋಶಿ
ಸಂಘಟಿತರಾಗದಿದ್ದರೆ ಸಮಸ್ಯೆ ಖಚಿತ!
ಸಮಾಜದಲ್ಲಿ ಸಭ್ಯತೆ, ಸಂಸ್ಕಾರ, ದೈವಭಕ್ತಿ, ಸಂಸ್ಕøತಿ, ಇತಿಹಾಸದ ಸತ್ಯತೆ, ಪರಂಪರೆ ಉಳಿದಿದ್ದೇ ಬ್ರಾಹ್ಮಣ ಸಮಾಜದಿಂದ ಎಂಬುದು ಯಾರೂ ಮರೆಯಕೂಡದು. ನಾವು ಸುಸಂಸ್ಕøತರು, ಬುದ್ಧಿವಂತರು ಹಾಗೂ ಶಾಂತಿಪ್ರೀಯರು. ಯಾರ ತಂಟೆಗೆ ಹೋಗುವವರಲ್ಲ. ಸಮಾಜಕ್ಕೆ ಒಳ್ಳೆಯದನ್ನೇ ಮಾಡುವ, ಉತ್ತಮ ಮಾರ್ಗದರ್ಶನ ಮಾಡುವ ಕಾರ್ಯ ಮಾಡುತ್ತ ಬಂದಿದ್ದೇವೆ. ಹೀಗಾಗಿ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿರುವುದೇ ಹೆಮ್ಮೆಯ ಸಂಗತಿ ಎಂದು ಹಿರಿಯ ಪತ್ರಕರ್ತ ಸದಾನಂದ ಜೋಶಿ ಹೇಳಿದರು. ಬ್ರಾಹ್ಮಣರು ಸದಾ ದೇಶ, ಧರ್ಮ, ಸಮಾಜ, ಸಂಸ್ಕøತಿಗೆ ಮೇಲೆತ್ತುವ ಕೆಲಸ ಮಾಡಿದ್ದಾರೆ. ಅನೇಕ ಆಪತ್ತುಗಳಿಂದ ದೇಶವನ್ನು, ಸಮಾಜವನ್ನು ಪಾರು ಮಾಡಿದ ಶ್ರೇಯಸ್ಸು ನಮಗಿದೆ. ಸಮಾಜಕ್ಕೆ ಸದಾ ಬೆಳಕು ತೋರಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಆದರೂ ಸಮಾಜದಲ್ಲಿ ಅತೀ ಹೆಚ್ಚು ಟೀಕೆ, ನಿಂದನೆಗೆ ನಾವೇ ಒಳಗಾಗುತ್ತಿರುವುದು ದುರದೃಷ್ಟಕರ ಸಂಗತಿ. ಇನ್ನಾದರೂ ನಾವು ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು ಎಂದು ಜೋಶಿ ಎಚ್ಚರಿಸಿದರು.