ಸುಸೂತ್ರವಾಗಿ ಜರುಗಿದ ಮತದಾನ
ಧಾರವಾಡ, ಮೇ.8: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಧಾರವಾಡದ ವಿವಿಧ ಮತಕ್ಷೇತ್ರಗಳ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಜರುಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಪಿಂಕ್ ಮತಗಟ್ಟೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಿಂಕ್ ಹಾಗೂ ಪಿಡ್ಬ್ಯುಡಿ ಮತಗಟ್ಟೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಖಿ ಬೂತ್‍ನಲ್ಲಿ ಮಕ್ಕಳ ಆಟಗಳ ದೃಶ್ಯ ಸಂತಸ ತಂದಿದೆ ಎಂದರು.
ಧಾರವಾಡ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಸಖಿ ಮತಗಟ್ಟೆಯಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಇದೇ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಕ್ಕಳಿಗಾಗಿ ಆಯೋಜಿಸಿದ ಆಟದ ಸಾಮಾನುಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮಕ್ಕಳನ್ನು ಎತ್ತಿಕೊಂಡು ಮತದಾನಕ್ಕೆ ಸರದಿಯಲ್ಲಿ ನಿಲ್ಲುವ ಬದಲು ಮತಗಟ್ಟೆಯ ಪಕ್ಕದಲ್ಲೇ ಮಕ್ಕಳನ್ನು ನೋಡಿಕೊಳ್ಳಲು ಕೊಠಡಿಯಲ್ಲಿ ವೈವಿದ್ಯಮಯ ಆಟದ ಸಾಮಾನುಗಳನ್ನು ಇಡಲಾಗಿತ್ತು. ನೂರಾರು ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜರುಗಿದ ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ. ಮತದಾನದ ಶೇಕಡವಾರು ಪ್ರಗತಿಯನ್ನು ಗಮನಿಸಿದರೆ ಕಳೆದ 2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗಿಂತ ಹೆಚ್ಚು ಮತದಾನವಾಗುವ ಲಕ್ಷಣಗಳಿವೆ ಎಂದು ಅವರು ಹೇಳಿದರು.
ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆ ಮತದಾನ ಆರಂಭವಾಗುವ ಸಮಯದಲ್ಲಿ ತಾಂತ್ರಿಕ ದೋಷದಿಂದ 17 ವಿವಿ ಪ್ಯಾಟ್‍ಗಳನ್ನು ಚುನಾವಣಾ ಆಯೋಗದ ಮಾರ್ಗದರ್ಶನ ನಿಯಮಗಳ ಪ್ರಕಾರ ಬದಲಿಸಲಾಗಿದೆ.
ಮತದಾನ ಮಾಡಿದ ಮತದಾರನು ತನ್ನ ಮತದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಅದನ್ನು ಹೇಳುವ, ಸಾಂಕೇತಿಕವಾಗಿ ತೋರಿಸುವ ಅಥವಾ ಮೊಬೈಲ್‍ನಲ್ಲಿ ಚಿತ್ರೀಕರಿಸುವ, ಸ್ಟೇಟಸ್ ಇಡುವ ಕಾನೂನು ಬಾಹಿರ ಕೃತ್ಯಗಳನ್ನು ಮಾಡಬಾರದು. ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಗೌಪ್ಯ ಮತದಾನವನ್ನು ಬಹಿರಂಗ ಮಾಡಿರುವ ಬಗ್ಗೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿ, ಚುನಾವಣಾ ಆಯೋಗದ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಿದೆ ಎಂದರು.
ಮತಚಲಾವಣೆ ಉತ್ಸುಕತೆ ಮೆರೆದ ವಿಕಲಚೇತನರು ಹಾಗೂ ಹಿರಿಯ ನಾಗರಿಕರು: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ಮತದಾನದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಸ್ವಯಂ ಸೇವಕರ ನೆರವು, ಗಾಲಿಖುರ್ಚಿ, ಭೂತಗಾಜಿನ ಸೌಲಭ್ಯ, ಬ್ರೈಲ್‍ಲಿಪಿ ಸೌಲಭ್ಯ ಒದಗಿಸಲಾಗಿತ್ತು.
18 ವರ್ಷದೊಳಗಿನ ಸ್ವಯಂ ಸೇವಕರು ಉತ್ಸಾಹದಿಂದ ವಯೋ ವೃದ್ಧರನ್ನು, ವಿಕಲಚೇತನರನ್ನು ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದುದು ಮೆಚ್ಚುಗೆಗೆ ಕಾರಣವಾಯಿತು. ಜಿಲ್ಲೆಯಲ್ಲಿ ವಿವಿಧ ಪ್ರಕಾರಗಳ ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸಿ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಮತದಾನ ವೀಕ್ಷಣೆಗೆ ವಾರ್ತಾ ಇಲಾಖೆಯಿಂದ ಮಾಧ್ಯಮ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 7 ಗಂಟೆಯಿಂದಲೇ ಹಲವಾರು ಮತಕೇತ್ರದಲ್ಲಿ ಮತದಾರರು ಸರದಿಸಾಲಿನಲ್ಲಿ ನಿಂತಿರುವ ದೃಶ್ಯ ಸಹಜವಾಗಿ ಕಂಡು ಬಂದಿತು.
ಕೆಲಗೇರಿ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 1324 ಜನ ಇರುವ ಮತದಾರರಲ್ಲಿ ಬೆಳಿಗ್ಗೆ 9 ಗಂಟೆಗೆ 240 ಮತದಾರರು ಮತ ಚಲಾಯಿಸಿದ್ದರು. ಮುಗದ ಶಾಲೆಯ ಮತಗಟ್ಟೆಯಲ್ಲಿ 1053 ಮತದಾರರ ಪೈಕಿ 214 ಮತದಾರರು ಮತ ಚಲಾಯಿಸಿದ್ದು, ಕಲ್ಲಾಪುರದಲ್ಲಿ 940ರ ಪೈಕಿ 262 ಮತಚಲಾವಣೆ ಆಗಿತ್ತು. ಕೊಟ್ಟೂರ ಗ್ರಾಮದ 4 ಮತಗಟ್ಟೆಯಲ್ಲಿ ಸಾಕಸ್ಟು ಜನ ಸರದಿಯಲ್ಲಿ ನಿಂತಿದ್ದರು. ಗರಗದ 7 ಮತಗಟ್ಟೆ ಕೇಂದ್ರಗಳ ಕ್ಲಸ್ಟರನಲ್ಲಿ ಬೆಳಿಗ್ಗೆ 9 ಗಂಟೆಗೆ ಶೇ.10 ರಷ್ಟು ಮತದಾನವಾಗಿತ್ತು. ರಾಮಾಪುರ, ಉಪ್ಪಿನಬೆಟಗೇರಿ, ಯಾದವಾಡ ಗ್ರಾಮಗಳಲ್ಲಿ ಅತಿ ಉತ್ಸಾಹದಿಂದ ಮತದಾರರು ಮತ ಚಲಾಯಿಸಿದರು.
ಮಧ್ಯಾಹ್ನದ ಉರಿಬಿಸಿಲಿನಲ್ಲಿ ಕೆಲವೆಡೆ ಮತಗಟ್ಟೆಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿತು. ಬೆಳಿಗ್ಗೆ ಹಾಗೂ ಸಂಜೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.