ಶಾಂತಿಯುತ ಮತದಾನ
ನವಲಗುಂದ,ಮೇ8 : ಲೋಕಸಭಾ ಚುನಾವಣೆ ಪ್ರಯುಕ್ತ ನವಲಗುಂದ ವಿಧಾನಸಭಾ ಕ್ಷೇತ್ರದ 234 ಮತಟ್ಟೆಗಳಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿ ಜರುಗಿತು.
ಬಿಸಿಲಿನ ಬೇಗೆಗೆ ಹೆದರಿದ ಮತದಾರರು ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗುತ್ತಿದ್ದಂತೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲು ಉತ್ಸಾಹ ತೋರಿದರು.
ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗುತ್ತಿದ್ದಂತೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕೆಲ ಮತಗಟ್ಟೆಗಳು ಮತದಾರರಿಂದ ತುಂಬಿ ತುಳುಕುತ್ತಿದ್ದವು. ಮದ್ಯಾಹ್ನ ಎರಡು ಗಂಟೆ ನೀರಸ ಮತದಾನ ನಡೆದರೆ. ಸಂಜೆ 4ಗಂಟೆಯ ನಂತರ ಮತಗಟ್ಟೆಗಳತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಚಲಾಯಿಸಿದರು.
ಕೆಲ ಮತಗಟ್ಟೆಗಳಲ್ಲಿ ಸರಿಯಾಗಿ 6 ಗಂಟೆಗೆ ಮತದಾನ ಸಂಪೂರ್ಣ ಸ್ಥಗಿತಗೊಂಡಿದ್ದರೆ. ಕೆಲವೊಂದು ಮತಗಟ್ಟೆಗಳಲ್ಲಿ ಸಮಯಕ್ಕೆ ಮುಂಚೆ ಬಂದವರಿಗೆ ಚೀಟಿ ನೀಡಿ ಗೇಟ್ ಬಂದ್ ಮಾಡಿ ಮತದಾನ ಮಾಡಲು ಅವಕಾಶ ನೀಡಲಾಯಿತು.
ಬಸವೇಶ್ವರ ನಗರದಲ್ಲಿ ಬಸವ್ವ ನಾಗಾವಿ ಎಂಬ 103 ವರ್ಷದ ಅಜ್ಜಿಯೊಬ್ಬರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಸುಡು ಬಿಸಿಲಿನಲ್ಲೂ ಉತ್ಸಾಹದಲ್ಲಿದ್ದ ಯುವ ಪಡೆಗಳು ಆಯಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತದಾರರನ್ನು ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ವಿಧಾನಸಭಾ ಕ್ಷೇತ್ರದಲ್ಲಿ 85401 ಪುರುಷ 78698 ಮಹಿಳೆಯರು ಹಾಗೂ ಇತರೆ 5 ಜನ ಮತಚಲಾಯಿಸಿದ್ದು ಒಟ್ಟು ಶೇ 77.02 ರಷ್ಟು ಮತದಾನವಾಗಿದೆ.