ಮಕ್ಕಳಿಗೆ ನೀಡುವ ಲಸಿಕೆಗಳು ಎದೆ ಹಾಲಿನಷ್ಟೇ ಮಹತ್ವವಾಗಿದೆ: ಡಾ.ಬಿ.ವಿ.ಗಿರೀಶ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೮; ಮಕ್ಕಳಿಗೆ ನೀಡುವ ಲಸಿಕೆಗಳು ಎದೆ ಹಾಲಿನಷ್ಟೇ ಮಹತ್ವವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.ಇಲ್ಲಿನ ಗೋಪಾಲಪುರ ರಸ್ತೆಯ ರಾಮ್‍ದಾಸ್ ಕಾಂಪೌಂಡ್‍ನ ಅಂಗನವಾಡಿ ಕೇಂದ್ರದಲ್ಲಿ  ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಪ್ರತಿ ವಾರ್ಡ್‍ನಲ್ಲಿಯೂ ಸಹ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲಸಿಕಾ ಸತ್ರವನ್ನು ಪ್ರತಿ ಗುರುವಾರ ಮತ್ತು ಮಂಗಳವಾರ ನಡೆಸುತ್ತಾರೆ. ತಂದೆ-ತಾಯಂದಿರಿಗೆ,  ಪೋಷಕರಿಗೆ, ಆಶಾ ಕಾರ್ಯಕರ್ತೆಯರು ಲಸಿಕಾ ದಿನಾಂಕವನ್ನು ಮುಂಚಿತವಾಗಿಯೇ ತಿಳಿಸಿರುತ್ತಾರೆ. ಲಸಿಕಾ ಕೇಂದ್ರಗಳಿಗೆ ತಪ್ಪದೇ ಮಕ್ಕಳನ್ನು ಕರೆ  ತನ್ನಿ. ಮಕ್ಕಳಿಗೆ ನೀಡುವ ಲಸಿಕೆಗಳು ಎದೆ  ಹಾಲಿನಷ್ಟೇ   ಮಹತ್ವವಾಗಿದೆ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅವರು ಲಸಿಕಾ ಅಧಿವೇಶನದ ಪೂರ್ವ ಸಿದ್ಧತಾ ಮಾನದಂಡಗಳನ್ನು ಪರಿಶೀಲಿಸಿ ಮಾತನಾಡಿ, ತಾಯಂದಿರು ತಮ್ಮ ಮಕ್ಕಳನ್ನು 2 ವರ್ಷದಲ್ಲಿ 7 ಬಾರಿ ಲಸಿಕಾ ಕೇಂದ್ರಕ್ಕೆ ಕರೆ ತನ್ನಿ. 12 ಮಾರಕ ರೋಗಗಳ ವಿರುದ್ಧ ನಿಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ ಜವಾಬ್ದಾರಿ ತೋರಿ ಮಕ್ಕಳ ಮರಣ ತಪ್ಪಿಸಿ ಎಂದರು.ಬೇಸಿಗೆಯಲ್ಲಿ ನಿರ್ಜಲೀಕರಣ ಆಗದಂತೆ ತಾಯಿ ಮಕ್ಕಳು ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಈ ಹಿಂದಿನ ಹೆರಿಗೆ ಸಿಜೇರಿಯನ್ ಹೆರಿಗೆಯಾಗಿದ್ದರೆ ಜನನದ ನಡುವೆ ಅಂತರ ಕನಿಷ್ಠ 4 ರಿಂದ 5 ವರ್ಷವಾದರೂ ಅಂತರವಿರಲಿ ಇದಕ್ಕಾಗಿ ಕುಟುಂಬ ಯೋಜನೆ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದ ಅವರು, ಮಕ್ಕಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರ ತಯಾರಿಸುವ ಬಗ್ಗೆ ತಾಯಂದಿರಿಗೆ ಮಾರ್ಗದರ್ಶನ ನೀಡಿದರು.ತಾಲ್ಲೂಕು ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯಣಮ್ಮ ಮಾತನಾಡಿ, ಲಸಿಕಾ ಸಂದೇಶಗಳು, ಲಸಿಕಾ ವೇಳಾಪಟ್ಟಿ ಯಾವ ಯಾವ ಲಸಿಕೆಗಳನ್ನು ಮಕ್ಕಳಿಗೆ ಯಾವ ಯಾವಾಗ ಕೊಡಿಸಬೇಕು ಎಂಬುದರ ಬಗ್ಗೆ ತಿಳಿಸಿ ಲಸಿಕಾ ಫಲಾನುಭವಿಗಳ ಪಟ್ಟಿ ಪರಿಶೀಲಿಸಿದರು.