ಬೆಂಗಳೂರಿನ ಹಲವೆಡೆ ಮಳೆ
ಬೆಂಗಳೂರು,ಮೇ.೮-ಭೀಕರ ಬಿಸಿಲಿನಿಂದ ಕಂಗೆಟ್ಟ ಬೆಂಗಳೂರು ಜನತೆಗೆ ಮಳೆರಾಯ ದಯೆ ತೋರಿದ್ದಾನೆ, ಇಂದು ಬೆಳಿಗ್ಗೆ ಮಳೆ ಬಿದ್ದು ವಾತಾವರಣ ಆಹ್ಲಾದಕರವಾಗಿದೆ. ಇಂದು ಸುರಿದ ಮಳೆಗೆ ಬೆಂಗಳೂರಿನ ಕೆಲವೆಡೆ ಜಲಾವೃತವಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿಗೆ ಬುಧವಾರ ಹಳದಿ ಅಲರ್ಟ್ ಘೋಷಿಸಿದೆ. ಹಳದಿ ಅಲರ್ಟ್‌ನಲ್ಲಿ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಬೆಂಗಳೂರು ನಗರ ಪೂರ್ವ ವರ್ತೂರು, ಬ್ರೂಕ್‌ಫೀಲ್ಡ್, ಮಹದೇವಪುರ, ವೈಟ್‌ಫೀಲ್ಡ್‌ನಿಂದ ಕಲ್ಯಾಣ ನಗರ, ಮಾರತ್ತಹಳ್ಳಿ, ಬೊಮ್ಮನಹಳ್ಳಿ, ಬೊಮ್ಮಸಂದ್ರ, ಅರೆಕೆರೆ ಮತ್ತು ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಜೆಪಿ ನಗರಎಚ್‌ಎಸ್‌ಆರ್, ಬಿಟಿಎಂ ಲೇಔಟ್, ಬಿಎಸ್‌ಕೆ, ಅಂಜನಾಪುರ, ಸರ್ಜಾಪುರ, ಕೆಆರ್ ಪುರ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿಯಲ್ಲಿ ಮಳೆಯಾಗಿದೆ. ಈ ನಡುವೆ ಬೆಂಗಳೂರು ನಗರದ ಆಗ್ನೇಯ ಭಾಗದಲ್ಲಿ ಮುಂಜಾನೆ ತುಂತುರು ಮಳೆಯಾಗಿದೆ.
ಏಪ್ರಿಲ್‌ನಲ್ಲಿ ಶೂನ್ಯ ಮಳೆ ದಾಖಲಾಗಿದ್ದ ಬೆಂಗಳೂರಿನಲ್ಲಿ ಮೇ ತಿಂಗಳೊಳಗೆ ಎರಡು ದಿನ ಮಳೆ ಸುರಿದಿದೆ. ಈ ತಿಂಗಳ ಅಂತ್ಯದವರೆಗೆ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ ೧೨೮.೭ ಮಿ.ಮೀ ಮಳೆಯಾಗುತ್ತದೆ.
ಮುಂದಿನ ಎರಡು ದಿನಗಳ ಕಾಲ ಸಂಜೆ ಅಥವಾ ರಾತ್ರಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆಯಲ್ಲಿ ತಿಳಿಸಿದೆ. ಇನ್ನೆರಡು ದಿನಗಳಲ್ಲಿ ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ೩೫ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೨ ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.
ಬೆಂಗಳೂರಿನಲ್ಲಿ ಮಳೆಯಿಂದಾಗಿ ೨೬ ವರ್ಷದ ಟೆಕ್ಕಿ ರವಿಕುಮಾರ್ ಬೆನ್ನು ಮೂಳೆ ಮುರಿದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮರದ ಕೊಂಬೆಯೊಂದು ಮೇಲೆ ಬಿದ್ದು ಬೆನ್ನು ಮೂಳೆ ಮುರಿದಿದೆ. ಸಿವಿ ರಾಮನ್ ನಗರದ ನಾಗವಾರಪಲ್ಲಿ ೨ನೇ ಕ್ರಾಸ್ ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಐಟಿ ಕಂಪನಿ ಉದ್ಯೋಗಿ ರವಿಕುಮಾರ್ ಸದ್ಯ ಎಚ್ ಎಎಲ್ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ವಿಮಾ ಕಂಪನಿಯು ಭರಿಸುವ ಭರವಸೆ ಇದೆ.