ಗುಲಬರ್ಗಾ ಲೋಕಸಭಾ ಚುನಾವಣೆ:ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ, ಬಿಸಿಲು ಲೆಕ್ಕಿಸದೆ ಮತ ಚಲಾಯಿಸಿದ ಮಹಾಪ್ರಭುಗಳು
ಕಲಬುರಗಿ:ಮೇ.7: ಗುಲಬರ್ಗಾ ಲೋಕಸಭಾ (ಪ.ಜಾ) ಚುನಾವಣೆಯ ಮತದಾನ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದಲೆ ಆರಂಭವಾಗಿದ್ದು, ಸರಾಸರಿ ಶೇ.45ರ ಟೆಂಪರೇಚರ್ ಬಿಸಿಲು ಲೆಕ್ಕಿಸದೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಶೇಷಚೇತನರು, ಹಿರಿಯ ನಾಗರಿಕರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಸ್ವಯಂ ಸೇವಕರು ಸಹಾಯ ಮಾಡುತ್ತಿರುವ ದೃಶ್ಯ ಕಂಡುಬಂತು. ವಿಶೇಷವಾಗಿ ಈ ಬಾರಿ ಚನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ಮೂಲಸೌಕರ್ಯ ಹೆಚ್ಚಿಸಿರುವುದು ಮತದಾರರಲ್ಲಿ ಸಂತಸ ಉಂಟು ಮಾಡಿತ್ತು.
ಯುವ ಮತದಾರರು, ಮಹಿಳಾ ಮತದಾರರು, ವಿಶೇಷಚೇತನರು, ಹಿರಿಯ ನಾಗರಿಕರು ಹುರುಪಿನಿಂದ ಮತದಾನ ಮಾಡಿದರು. ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು ತಮ್ಮ ಸಂತಸ ವ್ಯಕ್ತಪಡಿಸಿದರು.
ಬಿಸಿಲು ಹೆಚ್ಚಿದ್ದ ಕಾರಣ ತಂಪಾದ ಕುಡಿಯುವ ನೀರು, ನೆರಳಿನ-ಶಾಮಿಯಾನ ವ್ಯವಸ್ಥೆ, ಅಗತ್ಯ ಔಷಧೋಪಚಾರ ವ್ಯವಸ್ಥೆಗೆ ವೈದ್ಯಕೀಯ ತಂಡ ನಿಯೋಜನೆ ಮಾಡಲಾಗಿತ್ತು. ರ್ಯಾಂಪ್, ವ್ಹೀಲ್ ವ್ಯವಸ್ಥೆ ಚೇರ್ ವ್ಯವಸ್ಥೆ ಮಾಡಿದ್ದರಿಂದ ಹಿರಿಯ ನಾಗರಿಕರು, ವಿಶೇಷಚೇತನರು ಸುಗಮವಾಗಿ ಮತದಾನ ಮಾಡಿದರು.
ಸಖಿ ಮತಗಟ್ಟೆಯಲ್ಲಿ ಮಹಿಳೆಯರೆ ಹೆಚ್ಚು: ಜೇವರ್ಗಿ ಪಟ್ಟಣದ ಸಖಿ ಪಿಂಕ್ ಬೂತ್ ಸ.ಕ.ಹಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 89ರಲ್ಲಿ ಬೆಳಿಗ್ಗೆಯಿಂದ ಮಹಿಳಾ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೂ ಮಹಿಳಾ ಮತದಾರರು ಸಂಖ್ಯೆ ಇಳಿಮುಖವಾಗಲಿಲ್ಲ. ಮಹಿಳೆಯರು ಮತ್ತು ಪರುಷರಿಂದ ಮತಗಟ್ಟೆ ತುಂಬಿ ಹೋಗಿತ್ತು.
ಇದೇ ಆವರಣದ ಮತಗಟ್ಟೆ ಸಂಖ್ಯೆ 90ರಲ್ಲಿ ಶಿವರಾಜ ಮತ್ತು ಪವಿತ್ರಾ ದಂಪತಿ ತಮ್ಮ ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದ ನಂತರ ಪಿಂಕ್ ಸೆಲ್ಪಿ ಬೂತ್ ನಲ್ಲಿ ಪೆÇೀಸ್ ನೀಡಿದರು.
ಯುವ ಮತದಾರರಿಂದ ಮತದಾನ,ಅಭಿನಂದನಾ ಪತ್ರ ವಿತರಣೆ: ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಸ್ಥಳೀಯ ನಿವಾಸಿ ಬಿ.ಎ. ವ್ಯಾಸಂಗ ಮಾಡುತ್ತಿರುವ ರಾಧಿಕಾ ಅವರು ಪ್ರಥಮ ಬಾರಿಗೆ ಮತ ಚಲಾಯಿಸಿ ಸಂತಸ ಹಂಚಿಕೊಂಡರು. ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಟನೂರ ‘ಡಿ’ ಮತಗಟ್ಟೆ ಸಂಖ್ಯೆ 217ರಲ್ಲಿ ಯುವತಿಯರು ಮೊದಲ ಬಾರಿಗೆ ಮತ ಚಲಾಯಿಸಿದ ನಂತರ ವೋಟರ್ ಐ.ಡಿ. ಹಿಡಿದು ನಗೆ ಬೀರಿದರು. ಅತ್ತ ಅಫಜಲಪೂರ ಕ್ಷೇತ್ರದ ಮಾದರಿ ಯುವ ಬೂತ್ ಗುಡೂರ ಹೆಚ್.ಪಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 8ರಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವ ಮತದಾರರಿಗೆ ಗ್ರಾಮ ಪಂಚಾಯತಿಯಿಂದ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.
ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಇತ್ತೀಚೆಗೆ ಪಾಶ್ರ್ವವಾಯುಗೆ ಒಳಗಾದ ಪುರಸಭೆ ಸದಸ್ಯ ಪರಶುರಾಮ ದೊಡ್ಡಮನಿ ಆಟೋ ಸಹಾಯದಿಂದ ಮತಗಟ್ಟೆಗೆ ಬಂದು ತಮ್ಮ ಪತ್ನಿ, ತಾಯಿಯೊಂದಿಗೆ ಮತ ಚಲಾಯಿಸಿದರು.
ಗಣ್ಯರಿಂದ ಮತದಾನ: ಚಿತ್ರಾಪುರ ವಿಧಾನಸಭಾ ಕ್ಷೇತ್ರದ ಗುಂಡಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.26ರಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸೇಡಂ ತಾಲ್ಲೂಕಿನ ಉಡುಗಿಯ ಸ್ವಗ್ರಾಮದಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದರು. ಬಿ.ಜೆ.ಪಿ. ಅಭ್ಯರ್ಥಿ ಮತ್ತು ಸಂಸದ ಡಾ.ಉಮೇಶ ಜಾಧವ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 93 ರಲ್ಲಿ ಮತ ಚಲಾಯಿಸಿದರು.
ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ವಿಜಯ ವಿದ್ಯಾಲಯ ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂ.169ರಲ್ಲಿ ಮತ ಚಲಾಯಿಸಿದರು. ಅದೇ ರೀತಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಜಗತ್ ಪ್ರದೇಶದ ಮತಗಟ್ಟೆ ಸಂ.61ರಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮತ ಚಲಾಯಿಸಲು ಬಂದ ಹಿರಿಯ ಜೀವಿಗಳಿಗೆ ನೆರವಾದರು.
ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದು, ಇದರಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಹಾಗೂ ಅಗತ್ಯ ಸೇವಾ ವಲಯದಡಿ ಬರುವ 952 ಜನ ಮತದಾರರು ಈಗಾಗಲೆ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿರುತ್ತಾರೆ.