ಮಾಡಿಯಾಳ ವಿರಕ್ತ ಮಠದಲ್ಲಿ ಬಸವ ದರ್ಶನ ಪ್ರವಚನ ಪ್ರಾರಂಭ
ಕಲಬುರಗಿ,ಮೇ.7-ಇಂದಿನ ದಿನಗಳಲ್ಲಿ ಮನುಕುಲಕ್ಕೆ ಸುಖ ಶಾಂತಿ ನೆಮ್ಮದಿ ದೊರೆಯಬೇಕಾದರೆ ಪುರಾಣ ಪ್ರವಚನವನ್ನು ಆಲಿಸುವುದು ಬಹು ಮುಖ್ಯ ಎಂದು ಮಾಡಿಯಾಳ ಗ್ರಾಮದ ವಪ್ಪತ್ತೇಶ್ವರ ವಿರಕ್ತ ಮಠದ ಮರುಳಸಿದ್ಧ ಮಹಾಸ್ವಾಮಿಗಳು ನುಡಿದರು.
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ವಪ್ಪತ್ತೇಶ್ವರ ವಿರಕ್ತಮಠದಲ್ಲಿ ಬಸವ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಐದು ದಿನಗಳ ಬಸವ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವ ದರ್ಶನ ಪ್ರವಚನವೆಂದರೆ ಸಮಾಜದ ನ್ಯೂನತೆಯನ್ನು ತಮ್ಮ ಅಮೂಲ್ಯವಾದ ವಚನ ಸಾಹಿತ್ಯದೊಂದಿಗೆ ತಿದ್ದಿದಂತ ಮಹಾ ಪುರುಷ ಬಸವಣ್ಣನವರ ಬದುಕಿನ ವಿಚಾರವನ್ನು ಆಲಿಸುವುದು ಬಹು ಮುಖ್ಯ ಎಂದರು.
ಪುರಾಣ ಪ್ರವಚನಕಾರರಾಗಿ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಪ್ರವಚನವನ್ನು ನೀಡುತ್ತಾ ಬಸವಣ್ಣನವರ ತತ್ವಸಿದ್ಧಾಂತಗಳಿಗೆ ಮಾರುಹೋಗಿ ದೇಶದ ಅನೇಕ ಕಡೆಗಳಿಂದ ಕಲ್ಯಾಣಕ್ಕೆ ಶರಣರು ಆಗಮಿಸಿದ್ದು ಇತಿಹಾಸ. ಅಂತಹ ಅನೇಕ ವಿಚಾರಗಳನ್ನು ಬಸವಣ್ಣನವರ ಬದುಕಿನಲ್ಲಿ ಕಾಣಬಹುದು ಎಂದರು.
ಸಂಗೀತಗಾರರಾದ ಸಾಗರ ಭೀಮಳ್ಳಿ ಅವರ ವಚನ ಸಂಗೀತಕ್ಕೆ ಅಭಿಷೇಕ್ ವಿಶ್ವಕರ್ಮ ತಬಲಾಸಾತ ನೀಡಿದರು. ಮಾಡಿಯಾಳ ಗ್ರಾಮದ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.