ಗ್ರಾ.ಪಂ.ಸದಸ್ಯನ ಕೊಲೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕಲಬುರಗಿ,ಮೇ.7-ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಪ್ಪ ಬುಗಶೆಟ್ಟಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 48,000 ದಂಡ ವಿಧಿಸಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಸ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ ಶಿವಲಿಂಗಪ್ಪ ಬುಗಶೆಟ್ಟಿ ಅವರನ್ನು 02-11-2020 ರಂದು ಕಡಗಂಚಿ ಗ್ರಾಮದ ಶರಣಬಸಪ್ಪ ಅಲಿಯಾಸ್ ಶರಣು ತಂದೆ ರಾಜಪ್ಪಾ ಮಾದಗುಂಡ, ಸಾಯಿನಾಥ ತಂದೆ ರಾಜಪ್ಪಾ ಮಾದಗುಂಡ, ಯೋಗಿನಾಥ ರಾಜಪ್ಪಾ ಮಾದಗುಂಡ, ರಾಜಪ್ಪಾ ತಂದೆ ಪೀರಪ್ಪಾ ಮಾದಗುಂಡ, ಕೇದಾರನಾಥ ತಂದೆ ರಾಜಪ್ಪಾ ಮಾದಗುಂಡ, ಓಂನಾಥ ಅಲಿಯಾಸ್ ಓಮ್ಯಾ ತಂದೆ ರಾಜಪ್ಪಾ ಮಾದಗುಂಡ, ಅಶೋಕ ತಂದೆ ಮರೆಪ್ಪಾ ರಾಜಾಪೂರ ಅವರು ಸೇರಿಕೊಂಡು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು.
ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಅರುಣ್ ಎಸ್.ಮುರಗುಂಡಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಶರಣಬಸಪ್ಪ ಅಲಿಯಾಸ್ ಶರಣು ಮಾದಗುಂಡ, ಸಾಯಿನಾಥ ಮಾದಗುಂಡ, ಯೋಗಿನಾಥ ಮಾದಗುಂಡ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ರಾಜಪ್ಪಾ ಮಾದಗುಂಡ, ಕೇದಾರನಾಥ ಮಾದಗುಂಡ, ಓಂನಾಥ ಅಲಿಯಾಸ್ ಓಮ್ಯಾ ಮಾದಗುಂಡ, ಅಶೋಕ ರಾಜಾಪೂರ ಅವರಿಗೆ 7 ವರ್ಷಗಳ ಶಿಕ್ಷೆ ಮತ್ತು ಒಟ್ಟು 48 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕರಾದ ಗುರುಲಿಂಗಪ್ಪ ತೇಲಿ ಅವರು ವಾದ ಮಂಡಿಸಿದ್ದರು.