ಬಳ್ಳಾರಿ ಲೋಕಸಭಾ ಚುನಾವಣೆ ಬಿರು ಬಿಸಿಲಿನಲ್ಲೂ ಉತ್ಸಾಹದ ಮತದಾನ
* ಏರ್ ಕೂಲರ್ , ಫ್ಯಾನ್ ವ್ಯವಸ್ಥೆ
* ಓಆರ್ ಎಸ್ ದ್ರಾವಣ ವಿತರಣೆ
* ಷಾಮೀಯನದಿಂದ ನೆರಳು
* ಸೂಕ್ತ ಭದ್ರತೆ ಶಾಂತಿಯುತ ಮತದಾನ
* ಬೆಳಿಗ್ಗೆ ಚುರುಕು ಮದ್ಯಾಹ್ನ ಮಂದ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.07: ಈ  ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಂದುವರೆದಿದ್ದು. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 26.45 ರಷ್ಟು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ.45ರಷ್ಟು ಮತದಾನವಾಗಿತ್ತು ಒಟ್ಟಾರೆ ಶೇ 68 ರಿಂದ 70 ರಷ್ಟು  ಮತದಾನವಾಗುವ ಸಾಧ್ಯತೆ ಇದೆ. ಪ್ರಾಥಮಿಕ ವರದಿಗಳ ಪ್ರಕಾರ ಮಧ್ಯಾಹ್ನದ ವೇಳೆಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ.51ರಷ್ಟು, ಅತೀ ಕಡಿಮೆ ಹೂವಿನಹಡಗಲಿಯಲ್ಲಿ ಶೇ.40.30ರಷ್ಟು ಮತದಾನವಾಗಿತ್ತು. ಬಳ್ಳಾರಿ ನಗರದಲ್ಲೂ ಶೇ.41ರಷ್ಟು ಮತದಾನವಾಗಿತ್ತು.
ಬಿಸಿಲಿನ ತಾಪಮಾನ 43 ಡ್ರಿಗಿ ಸೆಲ್ಸಿಯಸ್  ಇರುವುದರಿಂದ ಬೆಳಿಗ್ಗೆಯೇ ಹೆಚ್ಚಿನ ಜನ ಬೂತ್ ಗಳತ್ತ ಆಗಮಿಸಿ ಮತ ಚಲಾಯಿಸಿದರು.
ಮತದಾರರಿಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಹಲವೆಡೆ ಏರ್ ಕೂಲರ್, ಷಾಮೀಯಾನ, ಓಆರ್ ಸ್ ದ್ರಾವಣದ ಪಾನಕ ನೀಡುವ ವ್ಯವಸ್ಥೆ ಮಾಡಿತ್ತು.
ಬಿಸಿನಿಂದಾಗಿ ಮಧ್ಯಾಹ್ನ ಒಂದಿಷ್ಟು ಮತದಾನ ಪ್ರಕ್ರಿಯೆ ಮಂದಗತಿಯಾಗಲಿದ್ದು. ಸಂಜೆ ನಾಲ್ಕರ  ನಂತರ ಮತ್ತೆ ಬಿರುಸಾಗುವ ಸಾಧ್ಯತೆ ಇದೆ.
ಕ್ಷೇತ್ರದ  ಎಂಟು ವಿಧಾನಸಭಾ ಕ್ಷೇತ್ರಗಳ 1972 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಅವರು ಸಂಡೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಬಳ್ಳಾರಿ ನಗರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಚೇರಿಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಬಸವೇಶ್ವರ ನಗರದ ವಂಕಿ ಮರಿಸಿದ್ದಮ್ಮ ಶಾಲೆಯ ಬೂತ್ ನಂಬರ್ 112 ರಲ್ಲಿ , ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇಂಟ್ ಜೋಷಪ್ ಬಾಲಕರ ಶಾಲೆಯಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಗಾಂಧಿನಗರದಲ್ಲಿ ಮತ ಚಲಾಯಿಸಿದರೆ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ತಮ್ಮ ಕುಟುಂಬ ಸಮೇತ ಬಳ್ಳಾರಿಯ ಕಮ್ಮಿಂಗ್ ರಸ್ತೆಯ ಸರ್ಕಾರಿ ಉರ್ದು ಶಾಲೆಯಲ್ಲಿ ಮತ ಚಲಾಯಿಸಿದರು.
ಇನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಮಂಜಮ್ಮ ಜೋಗತಿ ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿ ಪಟ್ಟಣದ ಬೂತ್ ನಂ 60 ರಲ್ಲಿ ಮತಚಲಾಯಿಸಿದರು. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ರಾರಾವಿ ಗ್ರಾಮದ  ಮತಗಟ್ಟೆ  ಸಂಖ್ಯೆ 48 ಮತ್ತು  ಕೆ.ಬೆಳಗಲ್ಲು ಗ್ರಾಮದ ಮತಗಟ್ಟೆ ಸಂಖ್ಯೆ 195 ರ   ಯಂತ್ರಗಳು ದೋಷವಿದ್ದ ಕಾರಣ ಒಂದು ವರೆ ತಾಸು ಮತದಾನ ಪ್ರಕ್ರಿಯೆ ವಿಳಂಬವಾಗಿ ಅರಂಭವಾಯ್ತು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಧ್ಸಾಹ್ನ 1..00 ಗಂಟೆಯವರೆಗೆ ಒಟ್ಟು ಶೇ.44.36% ಮತದಾನವಾಗಿತ್ತು. ವಿಧಾನಸಭಾ ವಾರು ಮತದಾನ ವಿವರ
ಬಳ್ಳಾರಿ ಗ್ರಾಮೀಣ – ಶೇ.44.05
ಬಳ್ಳಾರಿ ನಗರ – ಶೇ.40.98
ಹೂವಿನಹಡಗಲಿ – ಶೇ.40.30
ಹಗರಿಬೊಮ್ಮನಹಳ್ಳಿ- ಶೇ.43.34
ಕಂಪ್ಲಿ – ಶೇ.50.46
ಕೂಡ್ಲಿಗಿ – ಶೇ.47.46
ಸಂಡೂರು – ಶೇ.44.56
ವಿಜಯನಗರ – ಶೇ.44.28