ಉತ್ತರ ಕರ್ನಾಟಕ: ಚುರುಕಿನ ಮತದಾನ
ಹುಬ್ಬಳ್ಳಿ, ಮೇ7: ರಾಜ್ಯದಲ್ಲಿಂದು ಎರಡನೇ ಹಂತದ ಮತದಾನ ನಡೆದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಬಹುತೇಕ ಕಡೆಗಳಲ್ಲಿ ಚುರುಕಿನ ಮತದಾನ ನಡೆಯಿತು.
ಈ ಬಾರಿಯ ರಣಬೇಸಿಗೆಯಲ್ಲಿ ಸೂರ್ಯನ ಪ್ರಖರತೆಯಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಮತದಾರರು ಬಿಸಿಲೇರುವ ಮುನ್ನವೇ ಮತದಾನಕ್ಕೆ ಆಸಕ್ತಿ ತೋರಿದುದು ಕಂಡುಬಂದಿತು.
ಮಧ್ಯಾಹ್ನದ ವೇಳೆಗೆ ಧಾರವಾಡ, ಹಾವೇರಿ-ಗದಗ, ಬಾಗಲಕೋಟ, ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಸರಾಸರಿ ಶೇ. 40 ರಷ್ಟು ಮತದಾನ ನಡೆಯಿತು ಎಂದು ತಿಳಿದು ಬಂದಿದೆ.
ಮುಂಜಾನೆ ಮತದಾನ ನಡೆಸಿ ಹೊಲಗದ್ದೆಗಳಿಗೆ ತೆರಳಬೇಕಿದ್ದ ರೈತರೂ ಮತದಾನ ಕಾರ್ಯ ಆರಂಭವಾಗುವ ಏಳು ಗಂಟೆಯ ವೇಳೆಗೆ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ಸರತಿಯಲ್ಲಿ ನಿಂತ ದೃಶ್ಯ ಧಾರವಾಡ ಲೋಕಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಕಂಡುಬಂದಿತು.
ಅಲ್ಲದೆ ಬೆಳಿಗ್ಗೆಯಿಂದಲೇ ವಯೋವೃದ್ಧರು, ಯುವಕರು, ಮಹಿಳೆಯರು, ಅಂಗವಿಕಲರು ಮತಗಟ್ಟೆಗಳಿಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಮತದಾನ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಶಾಂತಿಯುತವಾಗಿ ನಡೆಯಿತು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18.31 ಲಕ್ಷ ಮತದಾರರಿದ್ದರೆ ಕಣದಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ, ಕಾಂಗ್ರೆಸ್‍ನ ವಿನೋದ ಅಸೂಟಿ ಸೇರಿದಂತೆ 17 ಜನ ಅಭ್ಯರ್ಥಿಗಳಿದ್ದಾರೆ.
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯ ಜಗದೀಶ ಶೆಟ್ಟರ್, ಕಾಂಗ್ರೆಸ್‍ನ ಮೃಣಾಲ್ ಹೆಬ್ಬಾಳ್ಕರ್ ಸೇರಿದಂತೆ 13 ಜನ ಅಭ್ಯರ್ಥಿಗಳು ಕಣದಲ್ಲಿದ್ದರೆ, ಚಿಕ್ಕೋಡಿ ಕಣದಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ, ಕಾಂಗ್ರೆಸ್‍ನ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ 18 ಜನ ಅಭ್ಯರ್ಥಿಗಳಿದ್ದಾರೆ.
ಶಾಂತಿಯುತ, ನ್ಯಾಯಸಮ್ಮತ ಮತದಾನ ಕಾರ್ಯ ನಡೆಯಲು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮೀಶ್ನರೇಟೆ ವ್ಯಾಪ್ತಿಯಲ್ಲಿ 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು ತಮಿಳ್ನಾಡಿನಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆಯಲ್ಲದೇ ಸಿ.ಆರ್.ಪಿ.ಎಫ್., ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲಾಗಿದೆ.
ಸೂಕ್ಷ್ಮ ಮತಗಟ್ಟೆಗಳಲ್ಲಿ ಇಬ್ಬರು, ಸಾಮಾನ್ಯ ಮತಗಟ್ಟೆಗಳಲ್ಲಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.