ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರ: ಮಂಡ್ಯದಲ್ಲಿ ಓರ್ವ ಸಾವು
ಬೆಂಗಳೂರು, ಮೇ ೭- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಹಲವು ಕಡೆ ಸುರಿದ ಧಾರಕಾರ ಮಳೆ ಹಾಗೂ ಗಾಳಿಗೆ ಮರಗಳು ಧರೆಗೆ ಉಳಿಸಿದರೆ, ಇನ್ನೊಂದೆಡೆ ಮಂಡ್ಯದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸೋಮವಾರ ರಾತ್ರಿ ನಗರದ ಆಸ್ಪತ್ರೆ ರಸ್ತೆಯಲ್ಲಿ ನಡೆದ ದುರಂತದಲ್ಲಿ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯನ ಪುತ್ರ ಕಾರ್ತಿಕ್ (೨೮) ಸಾವನ್ನಪ್ಪಿದ್ದಾರೆ.
ಮಂಗಳವಾರ ಕಾರ್ತಿಕ್ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಸ್ನೇಹಿತರಾದ ಸುನೀಲ್ ಮತ್ತು ಚೇರನಹಳ್ಳಿ ಮಂಜು ಅವರೊಂದಿಗೆ ಮಂಡ್ಯ ನಗರಕ್ಕೆ ಓಮ್ನಿ ಕಾರಿನಲ್ಲಿ ಬಟ್ಟೆ ಖರೀದಿಸಲು ಬಂದಿದ್ದರು.
ನಿನ್ನೆ ರಾತ್ರಿ ೮ರ ಹೊತ್ತಿಗೆ ಗಾಳಿಸಮೇತ ಮಳೆ ಆರಂಭಗೊಂಡಿದ್ದು, ಆಸ್ಪತ್ರೆ ರಸ್ತೆಯ ತಿರುವಿನಲ್ಲಿ ಮರ ಕಾರಿನ ಮೇಲೆ ಬಿದ್ದಿದೆ. ತಕ್ಷಣ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದರು. ಆದರೆ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದ ಕಾರ್ತಿಕ್ ಸಾವನ್ನಪ್ಪಿದ್ದು, ಇನ್ನಿಬ್ಬರು ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಗುಡುಗು ಸಹಿತ ಸುರಿದ ಮಳೆಗೆ ನಗರದ ಹಲವು ಕಡೆ ಅವಾಂತರಗಳೇ ಆದವು. ೨೫ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಬಿಟಿಎಂ ಲೇಔಟ್, ಯಶವಂತಪುರ, ಜಯನಗರ, ಕೋರಮಂಗಲ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿ ಹೋದರು.
ಮಳೆಯಿಂದಾಗಿ ಕಾರು ಪಲ್ಟಿಯಾಗಿ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಜಿಎನ್ ನಂಜುಂಡಸ್ವಾಮಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ನಂಜುಂಡಸ್ವಾಮಿ ತಲೆಗೆ ಏಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ರಾತ್ರಿ ೯ ಗಂಟೆಯ ಹೊತ್ತಿಗೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ ೩೯.೫ ಮಿಮೀ ಮಳೆಯಾಗಿದ್ದು, ನಂತರದ ದಯಾನಂದ ನಗರದಲ್ಲಿ (೩೨.೫ ಮಿಮೀ) ಮಳೆಯಾಗಿದೆ. ನಗರದ ೧೮ ವಾರ್ಡ್‌ಗಳಲ್ಲಿ ೧೦ ಮಿಮೀಗೂ ಹೆಚ್ಚು ಮಳೆಯಾಗಿದೆ.
ಇಂದು ಮತ್ತೆ ಮಳೆ..!
ಇಂದು ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಮಲೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.