ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಮುಖ್ಯ
ಕಲಬುರಗಿ :ಸೆ.22: ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಬಹಳ ಮುಖ್ಯವಾಗಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕಂಪ್ಯೂಟರ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಂಪ್ಯೂಟರನ ಉಪಯೋಗ ಗೊತ್ತು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜೊತೆಗೆ ಬೇರೆ ಬೇರೆ ಕೌಶಲ್ಯಗಳು ಕಲಿಯಬೇಕು. ಅಂದಾಗ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮುಕ್ತಾಂಬಿಕಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಆರ್.ಹುಗ್ಗಿ ಮಾತನಾಡಿ, ಇಂತಹ ಪ್ರದರ್ಶನಗಳು ಮಾಡುವದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಬಹಳ ದೊರೆಯುತ್ತದೆ. ಸಮಯ ವ್ಯರ್ಥ ಮಾಡದೆ ಓದಿನ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಜಗದೀಶ ಬಿಜಾಪೂರೆ ಅಧ್ಯಕ್ಷತೆ ವಹಿಸಿದರು. ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು. ವಿದ್ಯಾರ್ಥಿಗಳು ರೋಬೊಟ್ ತಯಾರಿಸಿದ್ದು ವಿಶೇಷವಾಗಿತ್ತು.