ನಾವು ಪಾಕಿಸ್ಥಾನಕ್ಕೆ ಹೋಗಲ್ಲ, ಬೇಕಿದ್ದರೆ ನೀವೇ ಪಾಕಿಸ್ಥಾನಕ್ಕೆ ಹೋಗಿ: ಯತ್ನಾಳಗೆ ಅಹಿಂದ ಮುಖಂಡರ ಸಲಹೆ
ವಿಜಯಪುರ,ಸೆ.22:ಮುಸ್ಲಿಂ ಹಾಗೂ ಅಹಿಂದ ಮುಖಂಡರು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಮುಸ್ಲಿಂ ಹಾಗೂ ಕಾಂಗ್ರೆಸ್ ಮುಖಂಡ ಅಬ್ದುಲ್‍ಹಮೀದ ಮುಶ್ರೀಫ್ ಹಾಗೂ ಅಹಿಂದ ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹರಿ ಹಾಯ್ದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ, ಔರಂಗಜೇಬ ಕುರಿತು ಶಾಸಕ ಯತ್ನಾಳ ವಿವಾದಾತ್ಮಕ ಹೇಳಿಕೆಗೆ ಪ್ರತಿಯಾಗಿ ಮುಸ್ಲಿಂ ಹಾಗೂ ಅಹಿಂದ ಮುಖಂಡರು ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.
ಈ ದೇಶ ಹಿಂದು, ಮುಸ್ಲಿಂ, ಸಿಖ್ ಎಲ್ಲರಿಗೂ ಸೇರಿದೆ. ಇಂಥ ದೇಶದಲ್ಲಿ ಹಿಂದು- ಮುಸ್ಲಿಂರಿಗೆ ಜಗಳ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಮೊದಲು ಶಾಸಕ ಯತ್ನಾಳ ಬಿಡಬೇಕು ಎಂದು ಮುಸ್ಲಿಂ ಮುಖಂಡ ಅಬ್ದುಲ್‍ಹಮೀದ ಮುಶ್ರೀಫ್ ಟೀಕಿಸಿದರು.
ಶಾಸಕ ಯತ್ನಾಳ ಮುಸ್ಲಿಂರ ವಿಷಯದಲ್ಲಿ ಮಾತೆತ್ತಿದರೆ ಮುಸ್ಲಿಂ ಜನರಿಗೆ ಪಾಕಿಸ್ಥಾನಕ್ಕೆ ಹೋಗಲು ಹೇಳುತ್ತಾರೆ. ಮುಸ್ಲಿಂರೂ ಭಾರತೀಯರಾಗಿದ್ದಾರೆ. ಪಾಕಿಸ್ಥಾನದ ಮೇಲೆ ನಿಮಗೆ ಅಷ್ಟೊಂದು ಪ್ರೀತಿ ಉಕ್ಕಿ ಹರಿಯುತ್ತಿದ್ದರೆ ನೀವೇ ಪಾಕಿಸ್ಥಾನಕ್ಕೆ ಹೋಗಬೇಕು ಎಂದು ಶಾಸಕ ಯತ್ನಾಳಗೆ ಮುಶ್ರೀಫ್ ಟಾಂಗ್ ನೀಡಿದರು.
ಶಿವಾಜಿ ಬಳಿಯೂ ಮುಸ್ಲಿಂರಿದ್ದರು. ಅಷ್ಟೇಯಲ್ಲ. ಆದಿಲ್‍ಶಾಹಿ ಆಸ್ಥಾನದಲ್ಲೂ ಹಿಂದುಗಳಿದ್ದರು. ಆಗಿನ ವಿಷಯ ಏಕೀಗ ಎಂದ ಮುಶ್ರೀಫ್, ಪಾಕಿಸ್ಥಾನ ನಮಗೆ ಸಂಬಂಧವಿಲ್ಲ. ನಾವು ಇಂಡಿಯನ್. ಇಂಡಿಯಾದಲ್ಲಿಯೇ ಇರುತ್ತೇವೆ ಎಂದು ಹೇಳಿದರು.
ಜಗಳ ಬಿಟ್ಟು ಅಭಿವೃದ್ಧಿ ಮಾಡಿ. ಜೋಕರ್‍ಗಿಂತಲೂ ಕಡೆಯಾಗಿ ವರ್ತಿಸುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ದಿ ಕಡೆಗೆ ಗಮನ ಹರಿಸಿ ಎಂದು ಮುಶ್ರೀಫ್ ಶಾಸಕ ಯತ್ನಾಳಗೆ ಸಲಹೆ ನೀಡಿದರು.
ಎಂ.ಸಿ. ಮುಲ್ಲಾ, ಅಬ್ದುಲ್‍ರಜಾಕ ಹೊರ್ತಿ, ಫಯಾಜ್ ಕಲಾದಗಿ, ಸೋಮನಾಥ ಕಳ್ಳಿಮನಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.