ನ.2; ಪುತ್ತೂರಿನಲ್ಲಿ ‘ಅಶೋಕಾ ಜನಮನ’ 25 ಸಾವಿರ ಮಂದಿಗೆ ವಸ್ತ್ರದಾನ -ದೀಪಾವಳಿ ಕೊಡುಗೆ
ಪುತ್ತೂರು; ಪ್ರತೀ ವರ್ಷದಂತೆ ಈ ವರ್ಷದ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪುತ್ತೂರಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ವಸ್ತ್ರದಾನ ಕಾರ್ಯಕ್ರಮ ನ.೨ ರಂದು ನಡೆಯಲಿದೆ. ಈ ಬಾರಿ ೭೫ ಸಾವಿರ ಮಂದಿಗೆ ವಸ್ತೃದಾನ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಶುಕ್ರವಾರ ದರ್ಭೆಯ ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೊಂದು ಪಕ್ಷಾತೀತ ನೆಲೆಯಲ್ಲಿ ಹಾಗೂ ಬಡವರ ಸೇವೆಗಾಗಿಯೇ ಹಾಕಿಕೊಂಡ ಕಾರ್ಯಕ್ರಮವಾಗಿದೆ. ಇದರಲ್ಲಿ ಜಾತಿ ಧರ್ಮ ಭೇದಗಳಿಲ್ಲದೆ ಜನತೆ ಭಾಗವಹಿಸುತ್ತಾರೆ. ಕಳೆದ ಬಾರಿ ೬೩೫೦೦ ಮಂದಿಗೆ ವಸ್ತ್ರದಾನ ಮಾಡಲಾಗಿತ್ತು. ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ, ಮಕ್ಕಳಿಗೆ ಬೆಡ್‌ಶೀಟ್ ಈ ಬಾರಿಯೂ ನೀಡಲಾಗುವುದು. ವೃದ್ಧಾಪ್ಯದಲ್ಲಿರುವ ಮಂದಿಗೆ ವಸ್ತ್ರದಾನ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗುವಂತೆ ಪುತ್ತೂರು ಮಹಾಲಿಂಗೇಶ್ವರ ದೇವಳದಿಂದ ‘ಬಗ್ಗಿ’ ವಾಹನದ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ನೂತನ ನಾಮಕರಣ ‘ಅಶೋಕಾ ಜನಮನ”
ಕಳೆದ ೧೧ ವರ್ಷಗಳಿಂದ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ ವಸ್ತ್ರದಾನ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ನೂತನ ನಾಮಕರಣ ಮಾಡಲಾಗಿದೆ. ‘ಅಶೋಕಾ ಜನಮನ’ ಎಂಬ ಹೆಸರಿನೊಂದಿಗೆ ಇನ್ನು ವಸ್ತ್ರದಾನ ಕಾರ್ಯಕ್ರಮ ನಡೆಯಲಿದೆ. ೪೫ ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಗ್ರಾಮ ಭೇಟಿ- ಪಕ್ಷಾತೀತ ಕಾರ್ಯಕ್ರಮ
ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಕರ್ತರು ಪ್ರತೀ ಗ್ರಾಮಕ್ಕೂ ಹೋಗಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಇದು ಕಾಂಗ್ರೇಸ್ ಪಕ್ಷದ ಸಮಾವೇಶ ಖಂಡಿತಾ ಅಲ್ಲ ಎಂಬುವುದನ್ನು ನಾವು ತಿಳಿದುಕೊಳ್ಳಬೇಕು. ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯುವ ಸೇವಾ ಕಾರ್ಯಕ್ರಮ. ಬಡವರಿಗಾಗಿಯೇ ಮಾಡುತ್ತಿರುವ ಸೇವಾ ಕಾರ್ಯ. ಇದನ್ನು ಗ್ರಾಮದ ಜನತೆಗೆ ಮಾಹಿತಿ ನೀಡಬೇಕು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಫ್ಲೆಕ್ಸ್ ಹಾಕಲು ಸಮಸ್ಯೆಯಾಗುತ್ತದೆ. ಹಾಗಾಗಿ ವಾಟ್ಸಾಫ್ ಮೂಲಕ ಹೆಚ್ಚು ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾವು ಹೇಮನಾಥ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಅಮಲ ರಾಮಚಂದ್ರ, ನಿರಂಜನ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ನಿಹಾಲ್ ರೈ, ಉಮಾನಾಥ ಶೆಟ್ಟಿ ಪೆರ್ನೆ, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ವಿಟ್ಲ ಮತ್ತಿತರರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ಕಬಕ ಕಾರ್ಯಕ್ರಮ ನಿರೂಪಿಸಿದರು.