ಗಗನಕ್ಕೆ ಏರಿದ ಬಂಗಾರದ ಬೆಲೆ
ಚಿಕ್ಕಬಳ್ಳಾಪುರ : ಮೇ 7- ಪ್ರತಿ ವರ್ಷ ವೈಶಾಖ ಮಾಸದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಬಂಗಾರ ತನ್ನದಾಗಿಸುವ ಸಡಗರ ಸಂಭ್ರಮದ ಹಬ್ಬ ಅಕ್ಷಯ ತೃತೀಯ ಆದರೆ ಈ ವರ್ಷ ಬಂಗಾರದ ಬೆಲೆ ಗಗನಕ್ಕೆ ಏರಿದ್ದು ಬಂಗಾರ ಕೊಳ್ಳುವವರಲ್ಲಿ ನಿರುತ್ಸಾಹ ಮೂಡಿಸಿದೆ.
ಅಕ್ಷಯ ತೃತೀಯ ದಿನದಂದು ಹೊಸದಾಗಿ ಖರೀದಿಸಿದ ಬಂಗಾರದ ಒಡವೆಗಳನ್ನು ಲಕ್ಷ್ಮೀದೇವಿ ಮುಂದಿಟ್ಟು ಪೂಜೆ ಸಲ್ಲಿಸಿದರೆ ಅಂತಹವರ ಮನೆಗಳಲ್ಲಿ ಬಂಗಾರ ಇನ್ನಷ್ಟು ಮತ್ತಷ್ಟು ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮೀದೇವಿ ಕೃಪೆಯಿಂದ ಸಿರಿ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇತ್ತೀಚಿಗಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಚಲಿತಗೊಂಡ ಕಾರಣ ಬಂಗಾರದ ಅಂಗಡಿಗಳಿಗೆ ಜನ ಆ ದಿನ ಮುಗಿಬಿದ್ದು ಖರೀದಿಸುವುದು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.
ಆದರೆ ಈ ವರ್ಷ ಬಂಗಾರದ ಬೆಲೆ ಸರ್ವಕಾಲಿಕ ದಾಖಲೆ ಏರಿಕೆಯ ಪರಿಣಾಮ ಒಂದು ಗ್ರಾಂ ಚಿನ್ನಕ್ಕೆ ಏಳು ಸಾವಿರಕ್ಕೂ ಅಧಿಕ ಮೌಲ್ಯ ಆಗಿದ್ದು ಬಂಗಾರ ಕೊಳ್ಳಲು ಸಾಧ್ಯವಾಗದೆ ಮಧ್ಯಮ ವರ್ಗದ ಜನತೆ ಚಟಪಡಿಸುತ್ತಿದ್ದಾರೆ.
ಒಮ್ಮೆ ಬಂಗಾರ ಕೊಂಡರೆ ಅದು ಅವರ ಜೀವಮಾನದ ಪರ್ಯಂತ ಇಟ್ಟುಕೊಳ್ಳೋರು ಹಾಗೂ ಎಂದೂ ಒಳಪನ್ನ ಕಳೆದುಕೊಳ್ಳದ ಹಾಗೂ ಕಷ್ಟಕಾಲದಲ್ಲಿ ಕ್ಷಣಮಾತ್ರದಲ್ಲಿ ಹಣ ಒದಗಿಸಿಕೊಡುವ ಏಕೈಕ ಹಳದಿ ಲೋಹ ಇದೆ ಬಂಗಾರ ಆಗಿರುವುದು ಈ ಲೋಕದ ವಿಶೇಷವಾಗಿದೆ.
ಹಳ್ಳಿಗಾಡಿನ ಗಿರವಿ ಅಂಗಡಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಬ್ಯಾಂಕ್ ವಹಿವಾಟಿನ ತನಕ ಷೇರು ಮಾರುಕಟ್ಟೆಯಲ್ಲಿನ ಏರುಪೇರುಗಳಿಗೂ ಸಹ ಬಂಗಾರದ ಬೆಲೆಯೇ ಮಾನದಂಡವಾಗಲಿದೆ ಇದಿಷ್ಟೇ ಅಲ್ಲದೆ ದೇಶದಲ್ಲಿ ನೋಟುಗಳನ್ನ ಮುದ್ರಿಸಲು ಸಹ ಇಂತಿಷ್ಟು ಬಂಗಾರ ಕೇಂದ್ರ ಸರ್ಕಾರ ಸಂಗ್ರಹಿಸಬೇಕು ಎಂಬ ನಿಯಮವೂ ಇದೆ ಹಾಗಾಗಿ ಬಂಗಾರ ಎಂದರೆ ಎಲ್ಲರಿಗೂ ಅಷ್ಟೊಂದು ಪ್ರೀತಿ.
ಕೂಲಿ ಮಾಡುವವರಿಂದ ಹಿಡಿದು ದೇಶದ ಅಗರ್ಭ ಶ್ರೀಮಂತ ಅಂಬಾನಿ ತನಕ ಬಂಗಾರದ ಪ್ರದರ್ಶನ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಅವರವರ ಪ್ರತಿಷ್ಠೆಯನ್ನ ಹೆಚ್ಚಿಸುತ್ತದೆ ಉದಾಹರಣೆಗೆ ಕಡು ಬಡವರು ಮದುವೆ ಮಾಡಿಕೊಟ್ಟರೆ ಕನಿಷ್ಠ ಚಿನ್ನದ ದಾಳಿಯನ್ನಾದರೂ ಕೊಡಲೇಬೇಕು ಅದರೊಂದಿಗೆ ಮದುಮಗ ಹಾಗೂ ಮದುಮಗಳಿಗೂ ತಮ್ಮ ಕೈಲಾದಷ್ಟು ಚಿನ್ನವನ್ನು ಒಡವೆ ರೂಪದಲ್ಲಿ ಕೊಡುತ್ತಾರೆ ಆಗಾಗಿ ದೇಶದ ಜನರಲ್ಲಿ ಪ್ರತಿಯೊಬ್ಬರಿಗೂ ಬಂಗಾರ ಕೊಳ್ಳುವಿಕೆ ಅನಿವಾರ್ಯವಾಗಿದೆ.
ವಿವಾಹ ಸಮಾರಂಭ, ಆಸ್ತಿ ಖರೀದಿಸುವಿಕೆ, ಅನಾರೋಗ್ಯ ಸಂದರ್ಭ ಮಕ್ಕಳ ವಿದ್ಯಾಭ್ಯಾಸ ಮನೆ ಕಟ್ಟುವಿಕೆ ಈ ರೀತಿಯ ನಾನಾ ಕಾರಣಗಳಿಂದ ಬಂಗಾರ ಇದ್ದರೆ ಯಾರನ್ನು ಕಾಡಿ ಬೇಡದೆ ತನ್ನ ಒಡವೆ ಅಡಮಾನ ಇಟ್ಟು ತಮಗೆ ಬೇಕಿರುವಷ್ಟು ಹಣ ಪಡೆದುಕೊಳ್ಳಬಹುದಾಗಿದೆ ಆಗಾಗಿ ಇದು “ ಕಷ್ಟಕ್ಕೆ ಆಗುವ ನಂಟು “ ಎಂದು ಜನಸಾಮಾನ್ಯರು ತಿಳಿದುಕೊಳ್ಳುವುದರಿಂದಲೇ ಬಂಗಾರಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಡಿಮ್ಯಾಂಡ್ ಎಂದರು ತಪ್ಪಾಗಲಾರದು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಅಲ್ಪಸ್ವಲ್ಪ ಏರಿಳಿಕೆ ಹೊರತುಪಡಿಸಿದರೆ ಬಂಗಾರದ ಬೆಲೆ ನಿರಂತರ ಏರಿಕೆಯಲ್ಲಿ ಕಂಡು ಬಂದಿದೆ ಹೊರತು ಯಾವುದೇ ಸಂದರ್ಭದಲ್ಲಿ ಇಳಿಮುಖ ಕಂಡಿಲ್ಲ ಹಾಗಾಗಿ, ಮಾರುಕಟ್ಟೆಯಲ್ಲಿ ಬಂಗಾರ ಸ್ಥಿರತೆಯನ್ನು ಕಂಡುಕೊಂಡಿದೆ.
ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂಬ ಗಾದೆ ಮಾತಿನಂತೆ ಬಂಗಾರಕೊಳ್ಳುವ ಆತುರದಲ್ಲಿ ಮಧ್ಯಮ ವರ್ಗದವರು ಹರ ಸಾಹಸ ಪಟ್ಟು ಶಾಲಾ ಸೋಲಾ ಮಾಡಿ ಅಕ್ಷಯ ತೃತೀಯ ದಿನಕ್ಕೆ ಒಂದೆರಡು ಗ್ರಾಮ್ ಆದರೂ ಸಹ ಬಂಗಾರ ಕೊಳ್ಳಲು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ ಈ ವರ್ಷ ಮೇ 10 ರಂದು ಅಕ್ಷಯ ತೃತೀಯ ಬರುವ ಹಿನ್ನೆಲೆಯಲ್ಲಿ ಬಂಗಾರಕ್ಕೆ ಮತ್ತಷ್ಟು ಬೇಡಿಕೆ ಬಂದಿರುವುದು ಕಂಡು ಬಂದಿದೆ