ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದು ಬೆಂಭಲಿಸಲು ಪುಟ್ಟಸಿದ್ದಶೆಟ್ಟಿ ಮನವಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.07:- ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸಿದ್ದು ಮತದಾರರು ತಮ್ಮಗೆ ಪ್ರಾಶಸ್ತ್ಯ ಮತ ಚುನಾಯಿಸಬೇಕೆಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮತ್ತು ಮಾಜಿ ಎಂಎಲ್‍ಸಿಯೂ ಆದ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಕಳೆದ 24 ವರ್ಷಗಳಿಂದ ಆಯ್ಕೆಯಾಗಿರುವ ಮರಿತಿಬ್ಬೇಗೌಡರು ಶಿಕ್ಷಕರ ಸಮಸ್ಯೆ ಬಗೆಹರಿಸಲು ಗಮನ ಹರಿಸಲಿಲ್ಲ. ತಮ್ಮನ್ನು ಭೇಟಿ ಮಾಡಲು ಬಂದವರೊಡನೆ ಸೌಜನ್ಯದಿಂದ ನಡೆದುಕೊಂಡಿಲ್ಲ. ಹೀಗಾಗಿ ಇವರ ವೈಫಲ್ಯ ತಮಗೆ ನೆರವಾಗಲಿದೆ ಎಂದರು.
ಮರಿತಿಬ್ಬೇಗೌಡ ಅವರು ಗೆಲ್ಲಲು ನಾನು ಸಾಕಷ್ಟು ಸಹಕಾರ ನೀಡಿದ್ದು ಈ ಬಾರಿ ಅವರು ನನಗೆ ಅವಕಾಶ ನೀಡಬೇಕು. ಗುತ್ತಿಗೆ ಆಧಾರದ ಮೇಲೆ ಕಾಯಂಗೊಂಡಿರುವ ಅರೆ ಶಿಕ್ಷಕರಿಗೆ ವೇತನ ಬಡ್ತಿ ದೊರೆತಿಲ್ಲ. ಒಪಿಎಸ್ ಜಾರಿಗೊಂಡಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಕಟ್ಟಡ ದುರಸ್ತಿಯಾಗಿಲ್ಲ. ಹೀಗಾಗಿ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಂಪಶೆಟ್ಟಿ, ಶಿವರಾಜಪ್ಪ, ವಾಸುದೇವಮೂರ್ತಿ ಉಪಸ್ಥಿತರಿದ್ದರು.