ಮತದಾನ: ಎಂಟು ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರ
ರುದ್ರಪ್ಪ ಆಸಂಗಿ
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.7:ವಿಜಯಪುರ ಲೋಕಸಭೆ ಮೀಸಲು ಮತಕ್ಷೇತ್ರದ ಚುನಾವಣೆಯಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಮತದಾನ ನಡೆಯಲಿದೆ. ಹೀಗಾಗಿ ಈ ಎಂಟೂ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಪ್ರಭು ಇಂದು ಬರೆಯಲಿದ್ದಾರೆ.
ಚುನಾವಣೆ ಘೋಷಣೆಯಾದ ದಿನದಿಂದಲೇ ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದವು. ಮತದಾರರ ಮನವೊಲಿಸಲು ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ಪೈಪೋಟಿಗೆ ಇಳಿದಿದ್ದವು. ಎಲ್ಲೆಲ್ಲೂ ಮೈಕಾಸುರನ ಅಬ್ಬರ, ಪ್ರಚಾರ ಸಭೆಗಳು ದಿನವಿಡೀ ಬಿಡುವಿಲ್ಲದೆ ನಡೆದಿದ್ದವು. ನಾನಾ ಭಾಗಗಳಿಂದ ಆಯಾ ರಾಜಕೀಯ ಪಕ್ಷಗಳ ದಿಗ್ಗಜರು ಜಿಲ್ಲೆಗೆ ಆಗಮಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಪಾದಯಾತ್ರೆಗಳ ಮೂಲಕ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕೊನೆಯ ಕಸರತ್ತು ನಡೆಸಿವೆ. ಇಂದು ಮತದಾರ ಪ್ರಭು ಇವಿಎಂ ಮಷಿನ್‍ನಲ್ಲಿ ಬಟನ್ ಪ್ರೆಸ್ ಮಾಡುವ ಮೂಲಕ ತಮಗೆ ಯೋಗ್ಯ ಎನಿಸಿದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಅವರ ಹಣೆ ಬರಹ ಬರೆಯಲಿದ್ದಾರೆ.
ಉದ್ದನೆಯ ಸರತಿ ಸಾಲಿನಲ್ಲಿ ನಿಂತ ಮತದಾರರು
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಜಿಲ್ಲೆಯಲ್ಲಿ ಶೇ. 9,23ರಷ್ಟು ಮತದಾನವಾಗಿತ್ತು. ವಿಪರೀತ ತಾಪಮಾನದಿಂದಾಗಿ ಮತದಾನ ಮಂದವಾಗುವ ಸಾಧ್ಯತೆ ಇದೆ. ಆದರೆ ಜಿಲ್ಲಾ ಆಡಳಿತ ಮತಗಟ್ಟೆ ಆವರಣದಲ್ಲಿ ನೆರಳು, ನೀರು, ಆಸನ, ತಂಪು ಪಾನೀಯ ಹಾಗೂ ವೈದ್ಯಕೀಯ ಚಿಕಿತ್ಸೆ ಇವೇ ಮುಂತಾದ ಸೌಲಭ್ಯಗಳನ್ನು ಮಾಡಿದೆ. ಹೀಗಾಗಿ ಮತದಾರರಿಗೆ ಹೆಚ್ಚಿನ ತೊಂದರೆ ಆಗಲಿಕ್ಕಿಲ್ಲ.
ಬಿಸಿಲಿಗೆ ಹೆದರಿಕೊಂಡ ಮತದಾರರು ಬಹುತೇಕ ಮತಗಟ್ಟೆ ಎದುರು ಇನ್ನೂ ಮತದಾನ ಆರಂಭಕ್ಕೆ ಮುನ್ನವೇ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.
ಮಹಿಳೆಯರು, ಪುರುಷರು ಉದ್ದನೆ ಸಾಲಿನಲ್ಲಿ ನಿಂತಿದ್ದು ಬಹುತೇಕ ಮತಗಟ್ಟೆ ಎದುರು ಎಲ್ಲರ ಗಮನ ಸೆಳೆಯಿತು.
ಕಣದಲ್ಲಿ 8 ಅಭ್ಯರ್ಥಿಗಳು:
ಲೋಕಸಭಾ ಮೀಸಲು ಕ್ಷೇತ್ರದಿಂದ ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಮೇಶ ಜಿಗಜಿಣಗಿ (ಬಿಜೆಪಿ), ರಾಜು ಆಲಗೂರ (ಕಾಂಗ್ರೆಸ್), ಗಣಪತಿ ಲಾಲಸಿಂಗ್ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ), ಜಿತೇಂದ್ರ ಕಾಂಬಳೆ (ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ), ನಾಗಜ್ಯೋತಿ ಬಿ.ಎನ್. (ಎಸ್‍ಯುಸಿಐ ಪಕ್ಷದ), ರಾಜಕುಮಾರ ಅಪ್ಪಣ್ಣಾ ಹೊನ್ನಟ್ಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಮಜಿ ಹರಿಜನ್ (ನಕಿ ಭಾರತೀಯ ಏಕತಾ ಪಕ್ಷ), ತಾರಾಬಾಯಿ ಭೋವಿ (ಪಕ್ಷೇತರ) ಅವರು ಕಣದಲ್ಲಿದ್ದಾರೆ. ಈ ಎಲ್ಲ ಹುರಿಯಾಳುಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
2086 ಮತಗಟ್ಟೆಗಳು:
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಪ್ರತಿ ವಿಧಾನಸಭಾವಾರು 5 ಸಖಿ ಮತಗಟ್ಟೆ, 8 ದಿವ್ಯಾಂಗ ಮತಗಟ್ಟೆ, 8 ಯುವ ಮತಗಟ್ಟೆ, 8 ಧ್ಯೇಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಾದ್ಯಂತ 171 ಸೂಕ್ಷ್ಮ ಹಾಗೂ 41 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ಆಬ್ಜರ್ವರ್ ನೇಮಿಸಿದ್ದು, ವೆಬ್‍ಕಾಸ್ಟಿಂಗ್ ಮೂಲಕ ನಿಗಾ ಇಡಲಾಗುತ್ತಿದೆ. ಮತಗಟ್ಟೆ ಸುತ್ತ ಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
19,46,090 ಮತದಾರರು:
ಜಿಲ್ಲೆಯಲ್ಲಿ 9,87,974 ಗಂಡು, 9,57,906 ಹೆಣ್ಣು ಹಾಗೂ 210 ಇತರೆ ಮತದಾರರು ಸೇರಿದಂತೆ ಒಟ್ಟು 19,46,090 ಮತದಾರರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟು ಒಟ್ಟು 2357 ಮತದಾರರ ಪೈಕಿ 2170 ಮತದಾರರು ತಮ್ಮ ಮನೆಯಿಂದ ಮತ ಚಲಾಯಿಸಿದ್ದು, ಶೇ.92.06 ರಷ್ಟು ಮತದಾನವಾಗಿದೆ. ಅದರಂತೆ ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗವಿರುವ (ಪಿಡಬ್ಲೂಡಿ) ಒಟ್ಟು 886 ಮತದಾರರ ಪೈಕಿ 854 ಮತದಾರರು ಮತ ಚಲಾಯಿಸುವ ಮೂಲಕ ಶೇ.96.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರದ ಮತಗಟ್ಟೆ ನಂಬರ್ 4ರಲ್ಲಿ ಇವಿಎಂ ಮಷಿನ್‍ನಲ್ಲಿ ಉಂಟಾದ ದೋಷದಿಂದಾಗಿ ಮತದಾನ ಸುಮಾರು ಅರ್ಧ ಗಂಟೆ ವಿಳಂಬವಾಯಿತು.
ಪುರುಷರು, ಮಹಿಳೆಯರು ಉದ್ದನೆ ಸಾಲಿನಲ್ಲಿ ಮತದಾನಕ್ಕೆ ಕಾದು ನಿಂತರು. ಅಧಿಕಾರಿಗಳು ಇವಿಎಂ ಮಷಿನ್‍ನಲ್ಲಿ ಉಂಟಾದ ದೋಷ ಸರಿಪಡಿಸಲು ಮುಂದಾದರು. ಸ್ವಲ್ಪ ಸಮಯ ಕಳೆದ ನಂತರ ಇವಿಎಂ ಮಷಿನ್ ಸರಿಪಡಿಸಲಾಯಿತು. ಬಳಿಕ ಮತದಾನ ಆರಂಭಗೊಂಡಿತು.