ಚುನಾವಣೆ ಕರ್ತವ್ಯಕ್ಕೆ ಹೊರಟು ನಿಂತ ಅಧಿಕಾರಿಗಳು: ಬಸ್ಸುಗಳು
ಬೀದರ್:ಮೇ.6: ಜಿಲ್ಲೆಯ ಒಟ್ಟು ಆರು ವಿಧಾನ ಸಭೆ ಕ್ಷೇತ್ರಗಳ 1528 ಬೂತ್‍ಗಳಿಗೆ ಹಾಗೂ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ಕ್ಷೇತ್ರಗಳ 496 ಬೂತ್‍ಗಳಲ್ಲಿ ನಾಳೆ ಲೋಕಸಭೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲ ಸಿದ್ದತೆ ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ನಗರದ ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಎಲ್ಲ ಚುನಾವಣೆ ಕರ್ತವ್ಯಕ್ಕೆ ತೆರಳುವ ಅಧಿಕಾರಿಗಳು ಜಮಾವಣೆಗೊಂಡು ಅಲ್ಲಿ ಹಾಕಲಾದ ತಮ್ಮ ಕರ್ತವ್ಯ ಸ್ಥಳಗಳನ್ನು ಪತ್ತೆ ಮಾಡಿಕೊಂಡು ಕುಳಿತಿರುವರು. ಚುನಾವಣೆ ಕರ್ತವ್ಯ ಅಧಿಕಾರಿ, ಸಿಬ್ಬಂದಿ ಹಾಗೂ ಪೋಲಿಸರನ್ನು ಮತ್ತು ಮತಯಂತ್ರಗಳನ್ನು ಹೊತ್ತೊಯ್ಯಲು ವಾಹನಗಳು ಸಿದ್ದವಾಗಿ ನಿಂತಿವೆ. ಬಸ್ಸುಗಳು ಕಡಿಮೆ ಬಿದ್ದ ಕಾರಣ ಕ್ರೋಸರ್‍ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಚುನಾವಣಾ ನೋಡಲ್ ಅಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಚುನಾವಣೆ ಸಿಬ್ಬಂದಿಗಳಿಗೆ ನಾಳಿನ ಕರ್ತವ್ಯದ ಬಗ್ಗೆ ವಿವರಣೆ ನೀಡಿದಲ್ಲದೇ ತಾಂತ್ರಿಕ ದೋಷ ಕಂಡು ಬಂದಲ್ಲಿ ಅವುಗಳ ಪರ್ಯಯ ವ್ಯವಸ್ಥೆ ಬಗ್ಗೆಯೂ ಸಹ ಅವರಿಗೆ ಮಾಹಿತಿ ನೀಡಲಾಯಿತು.
ಈಗಾಗಲೇ ಜಿಲ್ಲಾಧಿಕಾರಿಗಳು ಹೇಳಿದಂತೆ ಜಿಲ್ಲೆಯಲ್ಲಿ ಒಟ್ಟು 6896 ಸಿಬ್ಬಂದಿಗಳು ಚುನಾವಣೆ ಕರ್ತವ್ಯದಲ್ಲಿ ತೊಡಗಿಕೊಂಡಿರುವರು. ಮತದಾನ ಶಾಂತಿಯುತವಾಗಿ ನಡೆಸಲು ಪೋಲಿಸ್ ಇಲಾಖೆಯಿಂದ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 2349 ವಿವಿಧ ಸ್ತರದ ಪೋಲಿಸ್ ತುಕಡಿಗಳು ಕಾರ್ಯನಿರ್ವಹಿಸಲಿವೆ. ಜಿಲ್ಲೆಯಲ್ಲಿ ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚು ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬೇತೃತ್ವದಲ್ಲಿ ಹಮ್ಮಿಕೊಳ್ಲಲಾಗಿತ್ತು. ಒಟ್ಟಾರೆ ಮತದಾನ ಪ್ರಮಾಣ ಈ ಬಾರಿ ಶೇಕಡಾ 80ಕ್ಕೂ ಅಧಿಕ ಪ್ರಮಾಣ ಮಾಡಬೇಕೆಂಬ ಗುರಿ ಹೊಂದಲಾಗಿದೆ. ಈ ಮೊದಲು ವಿಶೇಷ ಚೇತನರು, 85 ವರ್ಷಕ್ಕಿಂತ ಮೇಲ್ಪಟ್ಟವರು, ಕರ್ತವ್ಯ ಅಧಿಕಾರಿಗಳು ಮತ ಚಲಾಯಿಸಿದ್ದಾರೆ.
ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಬೀದರ್ ಜಿಲ್ಲೆ ಮಾದರಿಯಾಗಿ ಹೊರ ಹೊಮ್ಮುವಂತೆ ಜಿಲ್ಲಾಡಳಿತ ವ್ಯಾಪಕ ಚಟುವಟಿಕೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಸಂಜೆವಾಣಿಗೆ ಮಾಹಿತಿ ನೀಡಿದ್ದಾರೆ.