ಭಕ್ತಿ ಶ್ರದ್ಧೆ ಇದ್ದಲ್ಲಿ ದಿವ್ಯಶಕ್ತಿ ಅವಿರ್ಭವಿಸುತ್ತದೆ: ಹಾರಕೂಡ ಶ್ರೀಗಳು
ಬೀದರ್:ಮೇ.6: ಭಕ್ತಿ ಶ್ರದ್ಧೆ ಇದ್ದಲ್ಲಿ ದಿವ್ಯಶಕ್ತಿ ಅವಿರ್ಭವಿಸುತ್ತದೆ, ಇಂತಹ ದೈವ ಶಕ್ತಿ ಸತ್ಕಾರ್ಯಗಳಿಗೆ ಸದಾ ಸ್ಪೂರ್ತಿಯನ್ನು ನೀಡುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸೈದಾಪುರ ಗ್ರಾಮದಲ್ಲಿ ನೂತನ ಹನುಮಾನ ಮಂದಿರದ ಕಳಸಾರೋಹಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ತಿಳಿಯಾದ ನೀರಿನಲ್ಲಿ ಶುದ್ಧವಾದ ಪ್ರತಿಬಿಂಬ ಮೂಡುವಂತೆ ನಿರ್ಮಲವಾದ ಮನದಲ್ಲಿ ದೇವರ ಪ್ರತಿರೂಪ ಮೂಡುತ್ತದೆ.
ಸ್ವಾರ್ಥ ರಹಿತ ಧರ್ಮ ಸೇವೆಯಿಂದ ಆತ್ಮ ತೃಪ್ತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಜೀವನದಲ್ಲಿ ಕಷ್ಟ, ನಷ್ಟ, ತಾಪತ್ರೆಯ, ಅಶಾಂತಿ, ಆತಂಕ ತಲೆದೋರಿದಾಗ ವೀರ ಆಂಜನೇಯನನ್ನು ಭಕ್ತಿಯಿಂದ ನೆನೆದರೆ ಬದುಕಿಗೆ ಭದ್ರನೆಲೆ ದೊರುಕುವಲ್ಲಿ ಯಾವುದೇ ಸಂದೇಹವಿಲ್ಲ.
ಮಂದಿರಕ್ಕೆ ಕಳಶ ಅಳವಡಿಸುವುದೆಂದರೆ ಅದು ಇಡೀ ಗ್ರಾಮದ ಐಕ್ಯತೆಯ ಸಂಕೇತ, ಸೈದಾಪುರ ಜನತೆಯ ಹನುಮ ಭಕ್ತಿ ಸಂಚಿತ ನಿಧಿಯಾಗಿ ಯಾವತ್ತೂ ಕಾಪಾಡಲಿ ಎಂದು ಶುಭ ಹಾರೈಸಿದರು.
ಹಿರೇನಾಗಾಂವ ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು, ತಡೋಳ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಶ್ರೀಮತಿ ಸಾವಿತ್ರಿ ಶರಣು ಸಲಗರ ಮಾತನಾಡಿದರು.
ಸಂಜು ಪಾಟೀಲ, ರಾಜಣ್ಣ ಬೆಳಮಗೆ, ಸಿದ್ರಾಮ ಮೂಳೆ, ಸದಾನಂದ ಪಾಟೀಲ, ಹಣಮಂತ ಸೂರ್ಯವಂಶಿ, ಅಣ್ಣಪ್ಪ ಸಮದೇ, ಬಾಬಾರಾವ ಪಾಟೀಲ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಹಾಗೂ ಬಸಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.