ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಬಂದ್
ಬೆಂಗಳೂರು, ಮೇ. ೬- ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ ಎಂದು ಹೇಳಲಾಗಿದೆ.
ಒಟಿಟಿ, ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳು ಮುಚ್ಚುತ್ತಿದ್ದು, ಕಲೆಕ್ಷನ್, ಜನರ ಆಗಮನ ಕೂಡ ಕಡಿಮೆಯಾಗಿದ್ದು, ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ.
ಈ ಪಟ್ಟಿಗೆ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಕೂಡ ಸೇರಿದ್ದು, ಸುಮಾರು ೫೦ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಾವೇರಿ ಚಿತ್ರ ಮಂದಿರ ಇದೀಗ ಶಾಶ್ವತವಾಗಿ ಮುಚ್ಚಿದೆ.
೧೯೭೪ರ ಜನವರಿ ೧೧ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ ಸಿನಿಮಾ ಪ್ರದರ್ಶನದ ಮೂಲಕ “ಕಾವೇರಿ” ಚಿತ್ರಮಂದಿರ ಆರಂಭವಾಗಿತ್ತು.
ಅಂದಿನಿಂದ ಇಲ್ಲಿಯವರೆಗೂ ಈ ಚಿತ್ರ ಮಂದಿರದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯ ಚಿತ್ರಗಳು ತೆರೆಕಂಡಿದ್ದವು.
ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ ಸಿನಿಮಾದ ಆರಂಭಿಕ ಸೀನ್ ದೃಶ್ಯವನ್ನು ಇಲ್ಲೇ ಚಿತ್ರೀಕರಿಸಲಾಗಿತ್ತು.