ಮೆಡಿಕಲ್ ಪ್ರವೇಶ ಹಗರಣ ಸಿಬಿಐ ತನಿಖೆಗೆ ರಮೇಶ್ ಆಗ್ರಹ
ಬೆಂಗಳೂರು, ಮೇ. ೬-ಡಾ.ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಅಂಬೇಡ್ಕರ್ ಡೆಂಟಲ್ ಕಾಲೇಜುಗಳಲ್ಲಿ ನಡೆದಿರುವ ಎಂಬಿಬಿಎಸ್ ಹಾಗೂ ಬಿಡಿಎಸ್ ಪದವಿ ತರಗತಿಗಳ ಪ್ರವೇಶ ಹೆಸರಿನಲ್ಲಿ ನೂರಾರು ಕೋಟಿ ಹಗರಣ ನಡೆದಿದ್ದು, ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರಸ್(ಐ) ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಭಾಗಿಯಾಗಿದ್ದಾರೆ.ಈ ಪ್ರಕರಣವನ್ನು ಕೂಡಲೇ ಸಿಐಡಿ ಅಥವಾ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ೯೦೦ ಕ್ಕೂ ಹೆಚ್ಚು ಪುಟಗಳಷ್ಟು ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು,
ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಸಿರುವ ಡಾ.ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥ ರಾಧಾಕೃಷ್ಣ ದೊಡ್ಡಮನಿ.
ಗುರಪ್ಪಾಜಿ, ಮಹದೇವ ಪ್ರಸಾದ್, ಡಾ.ಎನ್. ಟಿ. ಮುರಳಿ ಮೋಹನ್, ವಿ. ಎಸ್. ಕುಬೇರ್ ಹಾಗೂ ಅಮಾನುಲ್ಲಾ ಖಾನ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಆಡಳಿತ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಪ್ರಾರಂಭದಲ್ಲಿ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕಗೊಂಡಿದ್ದ ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಭಾವವನ್ನು ಬಳಸಿ ಏಕಾಏಕಿ ಆಡಳಿತ ಮಂಡಳಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿದ್ದರು.
ಆಡಳಿತಾಧಿಕಾರಿಗಳ ಅವಧಿ ಮುಗಿದ ನಂತರ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ರೀತ್ಯಾ ನಿಯೋಜನೆಗೊಂಡ ಮೂರು ಮಂದಿ ಧರ್ಮದರ್ಶಿಗಳ ಮೇಲೆ ತೀವ್ರವಾದ ಒತ್ತಡ ಹೇರಿ ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡದ ಸದಸ್ಯರನ್ನು ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕ ಮಾಡಿಕೊಳ್ಳಲಾಗಿರುತ್ತದೆ ಎಂದು ಅವರು ಆರೋಪಿಸಿದರು.
ರಾಜ್ಯದ ಮೆಡಿಕಲ್ ಕಾಲೇಜುಗಳು ಮತ್ತು ಡೆಂಟಲ್ ಕಾಲೇಜುಗಳ ಇತಿಹಾಸದಲ್ಲಿಯೇ ಅತೀ ದೊಡ್ಡದಾದ ಹಗರಣ. ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅನರ್ಹ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಂದ ತಲಾ ಕನಿಷ್ಠ ೨ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ದಾನ ರೂಪದಲ್ಲಿ ಪಡೆದಿರುವ ಹಗರಣ ಇದಾಗಿದೆ ಎಂದರು.
೨೦೦೮-೦೯ ರಿಂದ ಇಲ್ಲಿಯವರೆಗೆ ಪ್ರತೀ ವರ್ಷ ಇಂತಹ ನೂರಾರು ಅನುತ್ತೀರ್ಣ ಅನರ್ಹ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪ್ರವೇಶ ಕೊಡಿಸಿದ್ದು, ಶ್ರೀಮಂತ ಕುಟುಂಬಗಳ ಅನುತ್ತೀರ್ಣ, ಅನರ್ಹ ವಿದ್ಯಾರ್ಥಿಗಳಿಗೆ ಜಾರ್ಖಂಡ್ ರಾಜ್ಯದ ಅನಾಮಿಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಂತೆ ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಪ್ರವೇಶಗಳನ್ನು ನೀಡಿದ್ದಾರೆ ಎಂದು ದೂರಿದರು.