ಸಿರಿಗೇರಿ ಉಪ ಮಾರುಕಟ್ಟೆ (ಎಪಿಎಂಸಿ) ಪ್ರವೇಶ ರಸ್ತೆ ದುರಸ್ಥಿಗೆ ಆಗ್ರಹ”
ಸಂಜೆವಾಣಿ ವಾರ್ತೆ                                 
ಸಿರಿಗೇರಿ.ಮೆ6. ಗ್ರಾಮದ ಬಳ್ಳಾರಿ ರಸ್ತೆಯಲ್ಲಿನ ಸಿರುಗುಪ್ಪ ತಾಲೂಕು ವ್ಯಾಪ್ತಿಯ ಎಪಿಎಂಸಿ ಕೃಷಿ ಉತ್ಪನ್ನ ಮಾರಾಟ ಉಪ ಮಾರುಕಟ್ಟೆಯ ಪ್ರವೇಶದ್ವಾರದಲ್ಲಿ ಮುರಿದಿರುವ ಕಬ್ಬಿಣದ ಸರಳುಗಳನ್ನು ಬದಲಿಸುವಂತೆ ರೈತಾಪಿ ಜನರು ಆಗ್ರಹಿಸುತ್ತಿದ್ದಾರೆ.   ಮಾರುಕಟ್ಟೆಯ ಕಾಂಪೌಂಡ್ ಗೋಡೆಗೆ ಹೊಂದಿಕೊಂಡು ಇರುವ ಚರಂಡಿ ಮೇಲೆ ಒಳಗೆ ಪ್ರವೇಶ ಮಾಡಬೇಕಿದೆ. ಪ್ರವೇಶದ್ವಾರದ ಎರಡೂ ಬದಿಯಲ್ಲಿ ಚರಂಡಿಯ ಮೇಲೆ ಕಬ್ಬಣದ ಪೈಪ್ ಸರಳುಗಳನ್ನು ಹಾಕಿದ್ದು, ಇವುಗಳು ಹಾಕಿದ ಕೆಲದಿನಗಳಲ್ಲೇ ಬಾಗಿ ಮುರಿದುಹೋಗಿ ಕಳಪೆ ಮಟ್ಟದ ಕಾಮಗಾರಿಗೆ ನಿದರ್ಶನವಾಗಿವೆ. ಇದರಿಂದ ಕೃಷಿ ಉತ್ಪನ್ನಗಳನ್ನು ಹೇರಿಕೊಂಡು ಒಳಗೆ ಹೊರಗೆ ಹೋಗುವ ವಾಹನಗಳಿಗೆ ತೊಂದರೆಯಾಗಿದೆ. ಮುರಿದುಹೋಗಿ ಹಲವು ತಿಂಗಳುಗಳೇ ಕಳೆದರೂ, ಅವರ ಗಮನಕ್ಕೆ ತಂದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಿಪೇರಿ ಮಾಡಿಸುವ ಗೋಜಿಗೆ ಬರುತ್ತಿಲ್ಲ. ಅಲ್ಲದೇ ಇಲ್ಲಿ ಧಾನ್ಯಗಳ ಹೊತ್ತು ತರುವ ವಾಹನಗಳನ್ನು ತೂಕಮಾಡಲು ತೂಕದ ಯಂತ್ರ (ವೇಬಿಡ್ಜ್) ಇದ್ದು, ಇದು ದಾಖಲೆಗೆ ಮಾತ್ರ ಎಂಬಂತಿದೆ ವೇಬಿಡ್ಜ್ ಕೆಟ್ಟುಹೋಗಿ ವರ್ಷಗಳೇ ಉರುಳಿದರೂ ಇದರ ರಿಪೇರಿ ಮಾಡಿಸಿ ಪುನಹ ಪ್ರಾರಂಭಿಸುವ ಗೋಜಿಗೆ ಬರುತ್ತಿಲ್ಲ. ಕಳೆದ ವರ್ಷ ಕೋಟ್ಯಂತರ ರೂ. ಅನುದಾನದಲ್ಲಿ ಉಪಮಾರುಕಟ್ಟೆಗೆ ಬೇಕಾಗಿರುವ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆಯಾದರೂ ಕಾರ್ಯ ನಿರ್ವಹಿಸದೇ, ಇಲ್ಲಿ ವ್ಯವಸ್ಥೆಗಳು ಇದ್ದೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.  ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸಿರಿಗೇರಿ ಕೃಷಿ ಉತ್ಪನ್ನ ಉಪಮಾರುಕಟ್ಟೆಯ ವೈಬಿಡ್ಜ್ ಮತ್ತು ಪ್ರವೇಶಧ್ವಾರದ ಕಬ್ಬಿಣದ ಸರಳುಗಳ ರಿಪೇರಿಯನ್ನು ಕೈಗೊಳ್ಳಬೇಕೆಂದು ಈ ಭಾಗದ ರೈತರು ಆಗ್ರಹಪಡಿಸಿದ್ದಾರೆ.