ಬಳ್ಳಾರಿ ಲೋಕಸಭೆ ಚುನಾವಣೆಗೆ ಮತಗಟ್ಟೆಗಳತ್ತ ಸಿಬ್ಬಂದಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.06: ಲೋಕಸಭಾ ಕ್ಷೇತ್ರದ ಸದಸ್ಯರ ಚುನಾವಣೆಯ ಅಂಗವಾಗಿ ನಾಳೆ  ಮೇ 7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು.  ಇದಕ್ಕಾಗಿ  ನೇಮಕಗೊಂಡ ಸಿಬ್ಬಂದಿ ಮತದಾನಕ್ಕೆ ಅಗತ್ಯವಾದ ಸಾಮಾಗ್ರಗಳನ್ನು ತೆಗೆದುಕೊಂಡು ತಮ್ಮ ತಮ್ಮ‌ಮತಗಟ್ಟೆಗಳತ್ತ ಇಂದು ನಡೆದರು. ಕಂಪ್ಲಿ ವಿಧಾನಸಭಾ  ಕ್ಷೇತ್ರದ ಸಿಬ್ಬಂದಿ ನಗರದ ಸೇಂಟ್ ಫಿಲೋಮಿನಾ ಶಾಲೆಯಿಂದ,
ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ,  ಬಳ್ಳಾರಿ ನಗರ ಕ್ಷೇತ್ರಕ್ಕೆ ಸೇಂಟ್ ಜಾನ್ಸ್ ಪಿ.ಯು. ಕಾಲೇಜಿನಿಂದ, ಸಂಡೂರು ಕ್ಷೇತ್ರಕ್ಕೆ  ಅಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಮತಯಂತ್ರ, ಕಂಟ್ರೋಲ್ ಯುನಿಟ್, ವಿವಿಪ್ಯಾಟ್ ಯಂತ್ರ, ಶಾಯಿ, ಮತದಾನ ಮಾಡಿದ್ದಕ್ಕೆ ಮತದಾರರಿಂದ ಸಹಿ‌ಪಡೆಯುವ ಪುಸ್ತಕ, ಮತದಾಋ ಪಟ್ಟಿ ಮತ್ತಿತರೇ ಸಾಮಾಗ್ರಿಗಳನ್ನು ಪಡೆದು ನಿಗಧಿ‌ಪಡಿಸಿದ ಬಸ್, ಜೀಪ್, ವ್ಯಾನ್ಗಳಲ್ಲಿ ಆಯಾ ಮತಗಟ್ಟೆ ಕಡೆ ತೆರಳಿದರು.
ಇದೇ ರೀತಿ ವಿಜಯನಗರ ಜಿಲ್ಲೆ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ವಿಜಯನಗರ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹಡಗಲಿಗೆ ಸಹ ಸಿಬ್ಬಂದಿ ತೆರಳಿದ್ದಾರೆ.
ವಿಶೇಷ ಮೆಡಿಕಲ್ ಕಿಟ್: ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‍ಎಸ್ ಕಿಟ್‍ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ವಿತರಿಸಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ  ರ‌್ಯಾಂಪ್, ವೀಲ್‍ಚೇರ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ ಮಾಡಿದೆ. ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಸ್ಟ್ಯಾಂಡಿಂಗ್ ಫ್ಯಾನ್ ಅಥವಾ ಕೂಲರ್ ವ್ಯವಸ್ಥೆ ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಬಳ್ಳಾರಿ‌ ಜಿಲ್ಲೆಯ ನಾಲ್ಕು ಮತ್ತು ವಿಜಯನಗರ ಜಿಲ್ಲೆಯ ನಾಲ್ಕು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ.
ನಿನ್ನೆ ಸಂಜೆಯಿಂದ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಮಾಡಿದೆ. ಜಿಲ್ಲೆಯದ್ಯಂತ ಮದ್ಯ ಮಾರಾಟ ನಿಷೇಧಿಸಿದೆ. ನಾಳೆ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗೆ 05.30 ಗಂಟೆಗೆ ಮತಗಟ್ಟೆ ಏಜೆಂಟರುಗಳ ಸಮ್ಮುಖದಲ್ಲಿ ಕನಿಷ್ಟ 50 ಮತಗಳ ಅಣುಕು ಮತದಾನ ನಡೆಯಲಿದ್ದು, ನಂತರ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಬೆಳಿಗ್ಗೆ 07 ಗಂಟೆಗೆ ಮತದಾನ ಪ್ರಾರಂಭವಾಗಲಿದೆ.   ವೆಬ್‍ಕಾಸ್ಟಿಂಗ್:
 ಜಿಲ್ಲೆಯ ಒಟ್ಟು 1219 ಮತಗಟ್ಟೆಗಳ ಪೈಕಿ 299 ಸೂಕ್ಷ್ಮ ಹಾಗೂ 69 ವಲ್ನರೆಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು,  610 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಮತಗಟ್ಟೆಗಳ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಒಟ್ಟು 330 ಮೈಕ್ರೋ ಆಬ್ಸರ್ವರ್‍ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದೆ.
85 ವರ್ಷ ಮೇಲ್ಪಟ್ಟ, ವಿಕಲಚೇತನರು ಮತದಾನ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ದಾಟಿದ 662 ಹಿರಿಯ ನಾಗರಿಕರು ಹಾಗೂ  452 ವಿಕಲಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 630 ಮತದಾರರು ಹಾಗೂ 444 ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.
ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಹಾಗೂ ಕ್ಷೇತ್ರಗಳ 863 ಮತದಾರ ಪೈಕಿ.  460 ಜನರು ಮತ ಚಲಾಯಿಸಿದ್ದಾರೆ. 
ಭದ್ರತೆ:
ಮತದಾನಕ್ಕೆ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ  ಭದ್ರತೆಗೆ 2048 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಮಾಡಿದೆ. ಹೊರ ಜಿಲ್ಲೆಯಿಂದ 850 ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯಕ್ಕೆ ಜಿಲ್ಲೆಗೆ ಆಗಮಿಸಿದ್ದಾರೆ. ಸಿಆರ್‍ಪಿಎಫ್ ಪಡೆಯ ಮೂರು ತಂಡಗಳು ಬಂದಿವೆ.