ಸಿರುಗುಪ್ಪ : ಚುನಾವಣೆಗೆ ಸಕಲ ಸಿದ್ದತೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.06: ತಾಲೂಕಿನಲ್ಲಿ ಮೇ.೦7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿರುಮಲೇಶ್ ತಿಳಿಸಿದರು.
ನಗರದ ತಾಲೂಕು ಕಛೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಈ ಕ್ಷೇತ್ರದಲ್ಲಿ ಹೊರಗಿನಿಂದ ಬಂದ ಯಾವುದೇ ಪಕ್ಷದ ಮುಖಂಡರು, ವಾಸ್ತವ್ಯ ಇರುವಂತಿಲ್ಲ, ಬಹಿರಂಗ ಪ್ರಚಾರ ಮಾಡುವಂತಿಲ್ಲ, ಆದರೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಅವಕಾಶವಿರುತ್ತದೆ. ಮನೆ ಮನೆ ಪ್ರಚಾರದಲ್ಲಿ 5ಜನಕ್ಕಿಂತ ಹೆಚ್ಚುಜನ ಸೇರುವಂತಿಲ್ಲ,
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ 2,10,881ಮತದಾರರಿದ್ದರು. ಆದರೆ ಈ ಬಾರಿ ಹೊಸ ಮತದಾರರ ಸೇರ್ಪಡೆಯಿಂದಾಗಿ 2,25,326 ಮತದಾರರಿದ್ದು, ಇದರಲ್ಲಿ 1,10,207 ಪುರುಷ ಮತದಾರರು, 1,15, 018 ಮಹಿಳಾ ಮತದಾರರಿದ್ದು, ಇತರೆ 44ಒಟ್ಟು, 2,25,326 ಮತದಾರರಿದ್ದು, ಪುರುಷ ಮತದಾರರಿಗಿಂತ 4,811ಮಹಿಳಾ ಮತದಾರರೆ ಹೆಚ್ಚಾಗಿರುತ್ತಾರೆ.
228 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 456 ಇ.ವಿ.ಎಂ. 228 ವಿ.ವಿ.ಪ್ಯಾಟ್‌ಗಳನ್ನು ಸಿದ್ದಪಡಿಸಿಕೊಂಡಿದ್ದು, ಹೆಚ್ಚುವರಿಯಾಗಿ 104 ಇ.ವಿ.ಎಂ. ಮೆಷಿನ್ ಮತ್ತು 81 ವಿ.ವಿ.ಪ್ಯಾಟ್‌ಗಳನ್ನು ಕಾಯ್ದಿರಿಸಲಾಗಿದೆ. ಯಾವುದೇ ಮತಗಟ್ಟೆಯಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಇ.ವಿ.ಎಂ. ಮೆಷಿನ್ ಇಂಜಿನೀಯರ್‌ಗಳನ್ನು ಸಂಪರ್ಕಿಸಿ ತಕ್ಷಣವೇ ದೋಷ ಸರಿಪಡಿಸುವ ಅಥವಾ ಬೇರೆ ಮಿಷನ್ ಕೊಡುವ ವ್ಯವಸ್ಥೆ ಮಾಡಲಾಗುವುದು.
ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲಾಗಿದ್ದು, ಸುಗಮವಾಗಿ ಚುನಾವಣೆ ನಡೆಸಲು ಸಿಬ್ಬಂದಿಗೆ ವಿವಿರವಾದ ಮಾಹಿತಿಯನ್ನು ನೀಡಲಾಗಿದೆ.  ವಿವೇಕಾನಂದ ವಸತಿ ಶಾಲೆಯಲ್ಲಿ ಮತ ಪೆಟ್ಟಿಗೆಗಳನ್ನು ಸಿದ್ದಪಡಿಸಲಾಗಿದ್ದು, ಇಲ್ಲಿಂದಲೇ ಮತಗಟ್ಟೆಗಳಿಗೆ ಮತಪೆಟ್ಟಿಗೆಗಳನ್ನು ಚುನಾವಣಾ ಸಿಬ್ಬಂದಿಯೊಂದಿಗೆ ಕಳುಹಿಸಲು 61 ರೂಟ್‌ಗಳನ್ನು ಹಾಕಿಕೊಳ್ಳಲಾಗಿದ್ದು, ಬಸ್ ಮತ್ತು ಟ್ರ್ಯಾಕ್ಸಿಗಳ ಮೂಲಕ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲಿದ್ದಾರೆ. 
ತಾಲೂಕಿನ ಸಿರುಗುಪ್ಪ, ರಾರಾವಿ, ಹಳೇಕೋಟೆ ಗ್ರಾಮದಲ್ಲಿ ಒಂದು ಪಿಂಕ್ ಮತಗಟ್ಟೆ, ತೆಕ್ಕಲಕೋಟೆ, ಕೆಂಚನಗುಡ್ಡ ತಾಂಡದಲ್ಲಿ ಸಾಂಪ್ರದಾಯಿಕ ಮತಗಟ್ಟೆಯನ್ನು ತೆರೆಯಲಾಗಿದೆ.
ಬೆಳಿಗ್ಗೆ 7-೦೦ ಗಂಟೆಯಿಂದ ಸಂಜೆ 6-೦೦ ಗಂಟೆ ವರೆಗೆ ಮತದಾರರು ಮತದಾನ ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಿದರು. ತಹಶೀಲ್ದಾರ್ ಶಂಷಾಲಂ ಇದ್ದರು.