ಮತದಾನಕ್ಕೆ ಕ್ಷಣಗಣನೆ. 250ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ.
ಸಂಜೆವಾಣಿ ವಾರ್ತೆ,
ಕೂಡ್ಲಿಗಿ, ಮೇ.6  : – ಬಳ್ಳಾರಿ ಲೋಕಸಭೆ ಚುನಾವಣೆಗೆ  ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಇದ್ದು ನಾಳೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದೆ ನಾಳೆ  ನಡೆಯುವ ಮತದಾನಕ್ಕಾಗಿ 250 ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಇವಿಎಂ, ವಿವಿ ಪ್ಯಾಟ್ ಸೇರಿ ಚುನಾವಣಾ ಸಾಮಗ್ರಿಗಳನ್ನು ಸೋಮವಾರ ಪಡೆದು ಪರಿಶೀಲಿಸಿದ ನಂತರ ಇಂದು ಸಂಜೆ 3 ಗಂಟೆಯ ನಂತರ ಮತಗಟ್ಟೆಗಳಿಗೆ ತೆರಳಿದರು.
ಭದ್ರತಾ ಕೊಠಡಿಯಲ್ಲಿದ್ದ ಮತಯಂತ್ರಗಳನ್ನು ಕೂಡ್ಲಿಗಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ಸೇರಿ ಪೊಲೀಸರ ಸಮ್ಮುಖದಲ್ಲಿ 22 ಜನ ಸೆಕ್ಟರ್ ಅಧಿಕಾರಿಗಳಿಗೆ ವಿತರಿಸಲಾಯಿತು. ಸೆಕ್ಟರ್ ಅಧಿಕಾರಿಗಳು ಮತಯಂತ್ರಗಳನ್ನು ಪರಿಶೀಲಿಸಿ ಆಯಾ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಮತಯಂತ್ರಗಳನ್ನು ಪಡೆದ ಮತಗಟ್ಟೆ ಅಧಿಕಾರಿಗಳು ಸಹ ಅದರಲ್ಲಿರುವ ಬ್ಯಾಲೆಟ್ ನಮೂನೆಯು ಸರಿಯಾಗಿರುವುದನ್ನು ಖಾತರಿಪಡಿಸಿಕೊಂಡರು.
52 ಮಾರ್ಗಗಳು: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 250 ಮತಕೇಂದ್ರಗಳಿಗೆ ಪಿಆರ್ ಒ, ಎಪಿಆರ್ ಒ ಸೇರಿ 1200 ಸಿಬ್ಬಂದಿ ನಿಯೋಜನೆಗೊಂಡಿದ್ದು, 52 ಮಾರ್ಗಗಳಲ್ಲಿ ಮತಗಟ್ಟೆಗಳಿಗೆ ತಲುಪಲು 52 ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಮತಯಂತ್ರಗಳನ್ನು ಪರಿಶೀಲಿಸಿದ ಮತಗಟ್ಟೆ ಅಧಿಕಾರಿಗಳು ಸೇರಿ ಸಿಬ್ಬಂದಿ ಊಟ ಮಾಡಿದ ನಂತರ ಅವರಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
2,09,996 ಮತದಾರರು: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು- 1,06,034, ಮಹಿಳೆಯರು- 1,03,951 ಹಾಗೂ ಇತರೆ -11 ಸೇರಿ ಒಟ್ಟು 2,09,996 ಮತದಾರರಿದ್ದಾರೆ. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯವನ್ನು ಮೇ 7ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ ಹಾಕುವ ಮೂಲಕ ಮತದಾರರು ಬರೆಯಲಿದ್ದಾರೆ. ಲೋಕಸಭೆ ಚುನಾವಣೆಯ ಭದ್ರತೆಗಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ  ಒಬ್ಬ ಡಿವೈಎಸ್ಪಿ, ಮೂವರು ಸಿಪಿಐ, ಐವರು ಪಿಎಸ್ ಐ, 15 ಜನ ಎಎಸ್ ಐ, 82 ಹೆಡ್ ಕಾನ್ಸ್ ಟೇಬಲ್, 128 ಪೊಲೀಸರು, 218 ಗೃಹರಕ್ಷಕ ದಳ, ಡಿ.ಆರ್ ಮತ್ತು ಐಆರ್ ಬಿ ತಲಾ ಒಂದು ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ತಿಳಿಸಿದ್ದಾರೆ.