ಮತದಾರರನ್ನು ಸೆಳೆಯಲು ಸಜ್ಜಾದ 253 ಮತಗಟ್ಟೆ ಕೇಂದ್ರಗಳು. ಮತಗಟ್ಟೆಗಳಿಗೆ ಬಿಗಿ ಪೋಲಿಸ್ ಭದ್ರತೆ ನಿಯೋಜನೆ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ ಮೇ.6; ಮತದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿಶೇಷ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳಿದ್ದು ಇದರಲ್ಲಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೂಮ್ ನಂ.1, ತೆಲಗಿ ಗ್ರಾಮದ ಅಲಗಿಲವಾಡ ಪಾಟೀಲ್ ವಿರುಪಾಕ್ಷಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವಭಾಗ ಹಾಗೂ ಹಲವಾಗಲು ಗ್ರಾಮದ ಸರ್ಕಾರಿ ಜೂನಿಯರ್ ಕಾಲೇಜು ಕೊಠಡಿ ಸಂಖ್ಯೆ 2 ಮತ್ತು ಹರಪನಹಳ್ಳಿ ಪಟ್ಟಣದ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ಒಟ್ಟು 5 ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪಟ್ಟಣದ ಪುರಸಭೆ ಕಚೇರಿಯ ಮುಖ್ಯ ಸಭಾಂಗಣದಲ್ಲಿ ವಿಶೇಷ ಚೇತನರ ಮತಗಟ್ಟೆ, ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಯುವ ಮತಗಟ್ಟೆ, ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕೊಠಡಿ ಸಂಖ್ಯೆ 2 ರಲ್ಲಿ ಮಾದರಿ ಮತಗಟ್ಟೆ, ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡದಲ್ಲಿ ಯತ್ನಿಕ್ ಮತಗಟ್ಟೆ, ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದ ತರಬೇತಿ ಕೇಂದ್ರದಲ್ಲಿ ಅರಣ್ಯ ಮತದಾನ ಕೇಂದ್ರ (ವಿಷಯಾಧರಿತ) ಮತಗಟ್ಟೆಯನ್ನು ಸ್ಥಾಪಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.
ತಾಲೂಕಿನಲ್ಲಿ ಒಟ್ಟು 253 ಮತಗಟ್ಟೆ ಕೇಂದ್ರಗಳಿದ್ದು ಇದರಲ್ಲಿ 70 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ, ವಿಕಲ ಚೇತನರಿಗೆ ಅನುಕೂಲವಾಗಲೆಂದು ಪ್ರತಿ ಮತಗಟ್ಟೆಗೆ ವೀಲ್ ಚೇರ್‍ನ್ನು ಇಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದರು.
ತಾಲೂಕಿನಲ್ಲಿ 1,12,969 ಪುರುಷ, 1,10,985 ಮಹಿಳಾ ಮತದಾರರು ಹಾಗೂ 19 ಲಿಂಗತ್ವ ಅಲ್ಪಸಂಖ್ಯಾತ ಇದ್ದಾರೆ. ಚುನಾವಣೆಗಾಗಿ 26 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಪಟ್ಟಣದ ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ.
ಸ.ಕಿ.ಪ್ರಾಥಮಿಕ ಶಾಲೆ ಈಶಾಪುರ ಗ್ರಾಮದ ಮತಗಟ್ಟೆಯೊಂದರಲ್ಲಿ ಕೇವಲ 432 ಮತದಾರರಿದ್ದು ಇದು ಅತಿ ಚಿಕ್ಕ ಮತಗಟ್ಟೆ ಯಾಗಿದ್ದು, ಹರಪನಹಳ್ಳಿ ಪಟ್ಟಣದ ಸ.ಮಾ.ಹಿ ಪ್ರಾ ಶಾಲೆ ಕುರುಬಗೇರಿ ಶಾಲೆಯ ಮತಗಟ್ಟೆ ಯೊಂದರಲ್ಲಿ ಅತಿಹೆಚ್ಚು ಅಂದರೆ 1505 ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ.
ಇದೇ ಪ್ರಥಮ ಬಾರಿಗೆ 6964 ಯುವ ಮತದಾರರು ಮತ ಚಲಾಯಿಸಲಿದ್ದಾರೆ.
ವಿಶೇಷ ಆಕರ್ಷಣೆ: ಹರಪನಹಳ್ಳಿ ಪಟ್ಟಣದ ತಾಲೂಕು ಪಂಚಾಯ್ತಿಯ ಸಾಮಥ್ರ್ಯ ಸೌಧದಲ್ಲಿ ಅರಣ್ಯ ಮತದಾನ ಕೇಂದ್ರ ಸ್ಥಾಪಿಸಿ ಮರ ಗಿಡಗಳನ್ನು ಉಳಿಸಿ, ಬೆಳೆಸಲು, ಕಾಡು ಪ್ರಾಣಿಗಳ ರಕ್ಷಣೆ ಕುರಿತು ಮತದಾರರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಬಿಗಿ ಭದ್ರತೆ : ಚುನಾವಣಾ ಭದ್ರತೆಗೆ 2 ಡಿವೈಎಸ್ಪಿ, 4 ಸಿಪಿಐಗಳು, 10 ಪಿಎಸ್‍ಐಗಳು, 15 ಎಎಸ್‍ಐಗಳು, 250 ಪೇದೆ ಹಾಗೂ ಮುಖ್ಯ ಪೇದೆಗಳು, 300 ಗೃಹ ರಕ್ಷಕದಳ, ಡಿಆರ್, ಕೆಎಸ್‍ಆರ್‍ಪಿ ತಲಾ ಒಂದೊಂದು ವಾಹನಗಳು, ಹಾಗೂ ನಾಗಲ್ಯಾಂಡ ಪ್ಯಾರಮಿಲಿಟರಿ ಪಡೆಯ 90 ಜನರು, 16 ಸೆಕ್ಟರ್ ಮೊಬೈಲ್ ಹಾಗೂ 4 ಸೂಪರ ವೈಸರ್ ಮೊಬೈಲ್ ಹೀಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾಹಿತಿ ನೀಡಿದರು.
ಒಟ್ಟಿನಲ್ಲಿ ಶಾಂತಿಯುತ ಮತದಾನಕ್ಕೆ ತಾಲೂಕಿನಲ್ಲಿ ತಾಲೂಕು ಆಡಳಿತ ಸಕಲ ಸಿದ್ದತೆ ನಡೆದಿದೆ.
5ಎಚ್‍ಆರ್‍ಪಿ1:ಹರಪನಹಳ್ಳಿ ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿರುವ ಸಾಮಥ್ರ್ಯ ಸೌಧದಲ್ಲಿ ಅರಣ್ಯ ಮತದಾನ ಕೇಂದ್ರ ಸ್ಥಾಪಿಸಿರುವುದು.