ಕಸಾಪ ಸಂಸ್ಥಾಪನಾ ದಿನಾಚರಣೆ
ವಿಜಯಪುರ.ಮೇ೬: ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ೪ ದಶಕಗಳ ಹಿಂದೆ ಅಬ್ದುಲ್ ಖಾಲಕ್‌ರವರ ಅಧ್ಯಕ್ಷತೆಯಲ್ಲಿ ವಿಜಯಪುರ ಪಟ್ಟಣದಲ್ಲಿ ಪ್ರಾರಂಭವಾಗಿದ್ದು, ಅಂದು ಖಾಲಕ್‌ರವರು ಅಲ್ಪಸಂಖ್ಯಾತರಾಗಿದ್ದರೂ ಸಹ ಕನ್ನಡ ಭಾಷೆಗೆ ನೀಡುತ್ತಿದ್ದ ಪ್ರಾಮುಖ್ಯತೆ ಹಾಗೂ ಗುಣಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅದು ಇಂದಿಗೂ ಪಟ್ಟಣದಲ್ಲಿ ಮಾದರಿಯಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಸಂಸ್ಥಾಪಕ ಖಜಾಂಚಿ ಗಳಾದ ಎಂ ಗಿರಿರಾಜ್‌ರವರು ತಿಳಿಸಿದರು.
ಭಾನುವಾರದಂದು ಅವರು ಪಟ್ಟಣದ ಶಿಲ್ಪ ಪ್ರಿಂಟರ್ಸ್ ಮಳಿಗೆಯಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿಜಯಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ ೧೧೦ ನೆಯ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಮತ್ತು ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿ, ಎಂ ಗಿರಿರಾಜು ರವರು ಮಾತನಾಡುತ್ತಾ, ನನ್ನ ಅಧಿಕಾರ ಅವಧಿಯಲ್ಲಿ ಮೂರು ಬಾರಿ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೇನೆ ಎಂದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್ ಕೆ ನಂಜೇಗೌಡ ಭಾಗವಹಿಸಿ, ಮಾತನಾಡುತ್ತಾ, ಶುಕ್ರವಾರದಂದು ನಿಧನರಾದ ಹಿರಿಯ ಕಲಾವಿದರಾದ ಮುನಿ ಕೆಂಪಣ್ಣ ರವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು, ಅವರ ನಿಧನ ಕನ್ನಡ ಭಾಷೆಗೆ ಹಾಗೂ ಕಲಾವಿದರಿಗೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ರವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕರ್ನಾಟಕ ಸಾಹಿತ್ಯ ಪರಿಷತ್ ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಗಿ ಇಂದಿಗೂ ಸಹ ಅತ್ಯುತ್ತಮವಾಗಿ ನಡೆದುಕೊಂಡು ಬರುತ್ತಿದೆ. ಕನ್ನಡ ಸಮ್ಮೇಳನ ಸಾಹಿತ್ಯ ಕಾರ್ಯ ಆಯೋಜಿಸುವುದಕ್ಕಿಂತ ದಿನ ನಿತ್ಯ ಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ರವರು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾದ ಮಹೇಶ್ ರವರು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಮುನಿ ಕೆಂಪಣ್ಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಗಳಾದ ರಾಮಾಂಜಿನಪ್ಪ, ಹೋಬಳಿ ಕೋಶಾಧ್ಯಕ್ಷರಾದ ಕನ್ನಡಿಗ ಎನ್.ಕನಕರಾಜು, ಪಟ್ಟಣ ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಜೆ ಆರ್ ಮುನಿ ವೀರಣ್ಣ, ಕೆ. ಮುರುಳಿ, ಜೇಸಿಐ ವಲಯ ೧೪ರ ವಲಯಾಧಿಕಾರಿಗಳು ಎನ್.ಸಿ ಮುನಿ ವೆಂಕಟರಮಣ, ತಾಲೂಕು ಕನ್ನಡ ಕಲಾವಿದರ ಸಂಘದ ಪದಾಧಿಕಾರಿಗಳಾದ ಹಾರೋಹಳ್ಳಿ ಗ್ರಾಮದ ಬೈರೇಗೌಡ, ಮಂಜುನಾಥ್, ಸುಬ್ರಮಣಿ, ಮಳ್ಳೂರು ಮಂಜುನಾಥ, ಗೋವಿಂದರಾಜು ಉಪಸ್ಥಿತರಿದ್ದರು.