ದೇವಾಲಯಗಳ ಜೀರ್ಣೋದ್ಧಾರಕ್ಕೆ ಕರೆ
ವಿಜಯಪುರ.ಮೇ೬: ನೂತನ ದೇವಾಲಯಗಳನ್ನು ನಿರ್ಮಿಸುವುದಕ್ಕಿಂತ ನಮ್ಮಲ್ಲಿನ ಪುರಾತನವಾದ, ಐತಿಹಾಸಿಕ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ತೋರಿಸುವ ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವುದರಿಂದ ನಮ್ಮ ಪರಂಪರೆಯ ಉಳಿವಿಗೆ ನಾಂದಿಯಾಗಲಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷರಾದ ಹಾಗೂ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ ಸತೀಶ್ ಕುಮಾರ್ ತಿಳಿಸಿದರು.
ಅವರು ಪಟ್ಟಣದಲ್ಲಿ ಶ್ರೀ ಸಾಕ್ಷಿ ಮುರುಗ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ತುಪ್ಪದ ಚಿಕ್ಕ ವೀರಭದ್ರಪ್ಪ ಹಾಗೂ ವಸುಂದರಮ್ಮ ದಂಪತಿಗಳ ೬೩ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ದೇವಾಲಯದ ಅಭಿವೃದ್ಧಿಗಾಗಿ ನೀಡಿದ ಎರಡು ಲಕ್ಷ ರೂಗಳ ಚೆಕ್ ಸ್ವೀಕರಿಸಿ ದಂಪತಿಗಳನ್ನು ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಿ ಮಾತನಾಡುತ್ತಿದ್ದರು.
ದೇವಾಲಯ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ವಿ ರವೀಂದ್ರ ರವರು ಮಾತನಾಡುತ್ತಾ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯಕ್ಕೆ ಹಲವಾರು ತಲಮಾರುಗಳ ಭಕ್ತ ವೃಂದದವರು ಇದ್ದು ಈಗಾಗಲೇ ದಾನಿಗಳ ಸಹಕಾರದಿಂದ ೩೫ ಲಕ್ಷ ರೂಗಳ ವೆಚ್ಚದಲ್ಲಿ ದೇವಾಲಯದ ಹೊರಾಂಗಣವನ್ನು ಸಂಪೂರ್ಣ ಅಲಂಕೃತ ಕಲ್ಲುಗಳಿಂದ ನಿರ್ಮಿಸಿದ್ದು, ಇನ್ನೂ ಸುಮಾರು ೩೫ ಲಕ್ಷ ರೂಗಳ ವೆಚ್ಚದಲ್ಲಿ ದೇವಾಲಯದ ಕಾಮಗಾರಿ ಕೆಲಸಗಳು ನಡೆಯಬೇಕಿದ್ದು ದಾನಿಗಳು ಹಾಗೂ ಆಸ್ತಿಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾನ ಮಾಡುವ ಮೂಲಕ ದೇವಾಲಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಖಜಾಂಚಿ ವಿ ಜಗನ್ನಾಥ್, ಭಕ್ತ ಮಂಡಳಿಯ ವಾಹಿನಿ ಚಂದ್ರಣ್ಣ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಮ.ಸುರೇಶ್ ಬಾಬು, ವೀರೇಶ್ವರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅನಿಲ್ ಕುಮಾರ್, ಅಕ್ಕನ ಬಳಗದ ಸಹೋದರಿಯರಾದ ಮೀನಾ, ವಿಮಲಾಂಬ ಉಪಸ್ಥಿತರಿದ್ದರು.