ಸಂಗೀತಕ್ಕೆ ಯುವ ಪ್ರತಿಭೆ ಶಕ್ತಿಯಾಗಬೇಕು: ಕೃಷ್ಣಮೂರ್ತಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.06: ದ್ವೇಷ ಮರೆಸಿ ಒಂದಾಗಿಸುವ ಸಂಗೀತಕ್ಕೆ ಯುವಪ್ರತಿಭೆ ಶಕ್ತಿಯಾಗಬೇಕು ಮೊಬೈಲ್ ದೂರಸರಿಸಿ ಸುಗಮ ಸಂಗೀತ ಅಭಿರುಚಿ ಮೂಡಿಸಿಕೊಂಡರೆ ಸನ್ನಡತೆ, ಸಂಸ್ಕಾರದ ಪರಿಸರ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷ ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಹೂಟಗಳ್ಳಿಯ ಅನಂತೇಶ್ವರ ಭವನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ರಾಜ್ಯ ಹಾಗೂ ಮೈಸೂರು ಘಟಕ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಉಚಿತ ಸುಗಮ ಸಂಗೀತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಪರಿಷತ್ ವತಿಯಿಂದ ಸುಗಮ ಸಂಗೀತ ತರಬೇತಿ, ಹೊಸ ಪ್ರತಿಭೆ ಗುರುತಿಸಿ ಮುಖ್ಯವಾಹಿನಿಗೆ ತರುವ ಆಶಯವಿದೆ. ಒಂದೆರಡು ಗೀತೆ ಕಲಿತು ಟಿವಿಯಲ್ಲಿ ಬಂದರೆ ಸಾಕು ಎನ್ನುವ ಧೋರಣೆ ಬಿಡಿ. ವಿದ್ಯೆಗೆ ಕಲಿಯುವ ಹಂಬಲ, ತಪಸ್ಸು, ಶ್ರದ್ಧೆ ಬೇಕಿದೆ, ಸಂಗೀತಕ್ಕೆ ಸೋಲದ ಮನಸ್ಸಿಲ್ಲ. ವಿಶ್ವಭ್ರಾತೃತ್ವ ಶಕ್ತಿ ಇರುವ ಸುಗಮ ಸಂಗೀತಕ್ಕೆ ಕನ್ನಡ ನಾಡಿನಲ್ಲಿ ತನ್ನದೇ ಶಕ್ತಿ ಹೊಂದಿದೆ ಎಂದರು.
ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್ ಸುಗಮ ಸಂಗೀತದ ದ್ರುವತಾರೆ. ಮೈಸೂರು ಅನಂತಸ್ವಾಮಿ ಒಂದು ಚರಣ ಒಂದು ಪಲ್ಲವಿ ನಾಡಗೀತೆಗೆ ಹಾಡಿದರೆ ಸಿ. ಅಶ್ವಥ್ ಇಡೀ ಗೀತೆಗೆ ಸ್ವರ ಸಂಯೋಜನೆ ನೀಡಿದವರು. ನಾಡಗೀತೆ ದಾಟಿಗೆ ಪ್ರಾಮಾಣಿಕವಾದ ನ್ಯಾಯ ಸಿಗಬೇಕು ಸಿಕ್ಕೆ ಸಿಗಲಿದೆ ಎಂಬುದು ತನ್ನ ನಿಲುವು. ಅಪಸ್ವರ, ಟೀಕೆಗಳು ಬೇಡ ಎಂದರು.
ಮೈಸೂರು ಘಟಕ ಅಧ್ಯಕ್ಷ ನಾಗರಾಜು ವಿ. ಭೈರಿ ಮಾತನಾಡಿ ಪ್ರತಿವರ್ಷ ಶಿಬಿರ ನಡೆಸಿ, ಕಲಾವಿದರನ್ನು ಪರಿಚಯಿಸಿ ಗೌರವಿಸಲು ಕೆಲಸ ಮಾಡಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಪರಿಷತ್‍ಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಗಾಯಕ ಪ್ರವೀಣ್, ಚಿಕ್ಕಮಗಳೂರು ರಶ್ಮಿ, ಇಂದ್ರಾಣಿ ಅನಂತರಾಜು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪ್ರಶಾಂತ್ ಉಡುಪ, ಮೈಸೂರು ಘಟಕ ಅಧ್ಯಕ್ಷ ನಾಗರಾಜು ವಿ. ಭೈರಿ, ಮಂಡ್ಯ ಘಟಕ ಅಧ್ಯಕ್ಷ ಡೇವಿಡ್, ನಾ. ಗಂಗಾಧರಪ್ಪ, ಸಿರಿಬಾಬು, ಬೆಟ್ಟೇಗೌಡ ಭಾಗವಹಿಸಿದ್ದರು.