ಮಲೇರಿಯಾ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ: ಡಾ.ಎಸ್.ಚಿದಂಬರ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮೇ.06- ಮಲೇರಿಯಾ ರೋಗದ ನಿರ್ಮೂಲನೆ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣಅರಿವು ಮೂಡಿಸಿ ಭಾರತವನ್ನು ಮಲೇರಿಯಾ ಮುಕ್ತ ದೇಶವನ್ನಾಗಿಸಲು ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ಅವರು ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ (ಮಲೇರಿಯಾ ನಿರ್ಮೂಲನೆ) ಕುರಿತು ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಲೇರಿಯಾ ರೋಗ ಕುರಿತು ನಾಗರಿಕರನ್ನು ಜಾಗೃತಗೊಳಿಸಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಮನ್ವಯ, ಸಹಭಾಗಿತ್ವ ಅವಶ್ಯವಾಗಿದೆ. ರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಮಾಹಿತಿ ತಲುಪಲು ಮಾಧ್ಯಮಗಳ ಸಹಕಾರವು ಅಗತ್ಯವಾಗಿದೆ. ಒಟ್ಟಾರೆ 2025ರ ಏಪ್ರಿಲ್ ಅಂತ್ಯದೊಳಗೆ ದೇಶವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮಲೇರಿಯಾವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಕಾಯಿಲೆಯಾಗಿದ್ದು, ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮನುಷ್ಯನ ದೇಹವನ್ನು ಸೇರಿ ಕೆಂಪು ರಕ್ತ ಕಣಗಳನ್ನು ನಾಶ ಪಡಿಸುತ್ತವೆ. ಹಿಮೋಗ್ಲೋಬಿನ್ ಕಡಿಮೆಯಾಗಿ ಶರೀರವನ್ನು ನಿತ್ರಾಣಗೊಳಿಸುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಾಭಾವಿಕ ನೀರಿನ ತಾಣಗಳಾದ ಕೆರೆಕಟ್ಟೆಗಳು, ಬಾವಿ, ನದಿ, ಕಾಲುವೆ, ಕೃಷಿಹೊಂಡಗಳಲ್ಲಿರುತ್ತವೆ. ಮಲೇರಿಯಾ ರೋಗವನ್ನು ಪತ್ತೆ ಹಚ್ಚಲು ಪ್ರತಿ ಮನೆಮನೆಗೂ ಭೇಟಿ ನೀಡಿ ರಕ್ತದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗುತ್ತದೆ. ಯಾವುದೇ ಗ್ರಾಮಗಳಲ್ಲಿ ಪ್ರಕರಣಗಳು ಇಲ್ಲದಿದ್ದರೆ ಮಲೇರಿಯ ಮುಕ್ತ ಪ್ರದೇಶವೆಂದು ಘೋಷಿಸಲಾಗುತ್ತದೆ ಎಂದರು.
ನಮ್ಮ ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳಿದ್ದು, ಸೊಳ್ಳೆಗಳ ನಿಯಂತ್ರಣ ಒಂದು ಸವಾಲಾಗಿ ಪರಿಣಮಿಸಿದೆ. ಸೊಳ್ಳೆಗಳಿಂದ ರಕ್ಷಣೆಗಾಗಿ ಸಂಜೆ ವೇಳೆ ಮನೆ ಬಾಗಿಲು ಮುಚ್ಚಿರಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಸೊಳ್ಳೆಗಳು ನಿಂತ ನೀರಿನಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ನೀರು ಅನಾವಶ್ಯಕವಾಗಿ ಎಲ್ಲಿಯೂ ನಿಲ್ಲದಂತೆ ಎಚ್ಚರ ವಹಿಸಬೇಕು. ಪ್ರಮುಖವಾಗಿಕೆರೆ, ಕಟೆ,್ಟ ಹಳ್ಳ, ಬಾವಿ, ಕೃಷಿ ಹೊಂಡಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲುಗಪ್ಪಿ ಮತ್ತು ಗ್ಯಾಂಬೂಷಿಯ ಮೀನುಗಳನ್ನು ನೀರಿನಲ್ಲಿ ಬೆಳೆಸುವುದರ ಮೂಲಕ ನಿಯಂತ್ರಿಸ ಬಹುದಾಗಿದೆ ಎಂದ ಡಾ.ಚಿದಂಬರ ಅವರು ಪ್ರಸ್ತುತ ಚಾಮರಾಜನಗರವು ಮಲೇರಿಯಾ ಮುಕ್ತ ಜಿಲ್ಲೆಯಾಗಿದೆ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಾಜೇಶ್‍ಕುಮಾರ್ ಅವರು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನ ದನ್ವಯ ಪ್ರತಿವರ್ಷ ವಿಶ್ವ ಮಲೇರಿಯಾ ನಿರ್ಮೂಲನೆ ದಿನವನ್ನು ಏಪ್ರಿಲ್ 25ರಂದು ಏರ್ಪಡಿಸಲಾಗುತ್ತದೆ. ಮಲೇರಿಯಾ ನಿಯಂತ್ರಣಕ್ಕಾಗಿ ಈ ವರ್ಷದ ಘೋಷವಾಕ್ಯವು ‘ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ’ ಎಂಬುದಾಗಿದೆ. ಮಲೇರಿಯಾ ನಿರ್ಮೂಲನೆಗಾಗಿ ಸರ್ಕಾರವು 1953ರಲ್ಲಿ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು.
ಕಾರ್ಯಕ್ರಮ ಅನುಷ್ಟಾನಕ್ಕೂ ಮೊದಲು ದೇಶದಲ್ಲಿ ವಾರ್ಷಿಕವಾಗಿ 75 ಮಿಲಿಯನ್ ಪ್ರಕರಣಗಳಿದ್ದವು. ಕಾರ್ಯಕ್ರಮದ ಪರಿಣಾಮಕಾರಿ ಯಶಸ್ವಿ ಬಳಿಕ 1958ರಲ್ಲಿ ಮಹತ್ವ ಪೂರ್ಣ ಫಲಿತಾಂಶ ದೊರೆಯಿತು. ಪ್ರಕರಣಗಳು ಗಣನೀಯವಾಗಿ ಕಡಿಮೆ ಯಾದವು. 1966ರಲ್ಲಿ ಕರ್ನಾಟಕವು ಸೇರಿದಂತೆ ಬಹುತೇಕ ರಾಜ್ಯಗಳನ್ನು ಮಲೇರಿಯ ಮುಕ್ತ ರಾಜ್ಯಗಳೆಂದು ಘೋಷಿಸಲಾಯಿತು. ಪ್ರಸ್ತುತ ದೇಶದಲ್ಲಿ 1.5 ಲಕ್ಷ ಮಲೇರಿಯಾ ಪ್ರಕರಣಗಳಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಲೇರಿಯ ರೋಗದ ನಿರ್ಮೂಲನೆಗಾಗಿ ಕಳೆದ ಸಾಲಿನಲ್ಲಿ 2,51,619 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 3 ಮಲೇರಿಯ ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಆ ಮೂರು ಪ್ರಕರಣಗಳು ಹೊರ ರಾಜ್ಯ ವ್ಯಕ್ತಿಗಳಾದ್ದಾಗಿತ್ತು. ಒಟ್ಟಿನಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಕ್ಕಾಗಿ ವಿವಿಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ. ರಾಜೇಶ್‍ಕುಮಾರ್ ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕÀ ಸುರೇಶ್‍ಕುಮಾರ್, ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆ ಸ್ವಾಮಿ ನಾಯಕ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಾಸ್ಕರ್, ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣ್, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.