ವಿದೇಶದಲ್ಲಿ ಅವಿತು ಕುಳಿತ ಪ್ರಜ್ವಲ ರೇವಣ್ಣರನ್ನು ಸ್ವದೇಶಕ್ಕೆ ತರಲು ಪ್ರಧಾನಿ ಮುಂದಾಗಲಿ : ಬಾಬುರಾವ ಪಾಸ್ವಾನ್
ಬೀದರ:ಮೇ.6: 2800 ಮಹಿಳೆಯರ ಜೀವನ ಹಾಳು ಮಾಡಿದ ಕಾಮಪಿಶಾಚಿ ಹಾಸನ ಸಂಸದ ಪ್ರಜ್ವಲ ರೇವಣ್ಣ ಅವರ ಮೇಲೆ 2800 ಸುಮೋಟೊ ಪ್ರಕರಣಗಳು ದಾಖಲಿಸಿ ವಿದೇಶದಲ್ಲಿ ಅವಿತು ಕುಳಿತಿರುವ ಇವರನ್ನು ಸ್ವದೇಶಕ್ಕೆ ಕರೆತಂದು ನಾರಿಶಕ್ತಿಗೆ ಸಮ್ಮಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮುಂದಾಗಬೇಕೆಂದು ಎದ್ದೇಳು ಕರ್ನಾಟಕ ಸಂಘಟನೆಯ ಪ್ರಮುಖರಾದ ಬಾಬುರಾವ ಪಾಸ್ವಾನ್ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ರವಿವಾರ ಮಾತನಾಡಿರುವ ಅವರು ಪ್ರಜ್ವಲ್ ರೇವಣ್ಣ ಅವರೊಬ್ಬ ಸಂಸದರೆಂಬುದನ್ನು ಮರೆತು ಕಾಮಪಿಶಾಚಿ ರೂಪದಲ್ಲಿ ವರ್ತಿಸಿ ಇಡೀ ಭಾರತ ಜಗತ್ತಿನ ಮುಂದೆ ತಲೆತಗ್ಗಿಸುವಂತೆ ಮಾಡಿರುವರು. ಇವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹ ಇಂತಹ ದುಷ್ಕøತ್ಯದಲ್ಲಿ ಶಾಮೀಲಾಗುವ ಮೂಲಕ ಇಡೀ ನಾಗರಿಕ ಸಮಾಜ ದಂಗುಬಡಿಯುವಂತೆ ಮಾಡಿದೆ. ಇವರಿಗೆ ಬೆಂಬಲವಾಗಿ ನಿಂತಿರುವ ಕೇಸರಿ ಕಲಿಗಳು ಹಾಗೂ ಅನೇಕ ಹಿಂದೂಪರ ಸಂಘಟನೆಗಳು ಇಂದು ಏಕೆ ಬಾಯಿ ಬಿಡುತ್ತಿಲ್ಲ. ನೇಹಾ ವಿಚಾರದಲ್ಲಿ ರಾಜಕೀಯ ಮಾಡುವ ಇವರು ಈಗ ಮೌನ ವಹಿಸಿದರೇಕೆ? ಬಿಜೆಪಿಗರಿಗೆ ಧರ್ಮ-ಧರ್ಮಗಳಲ್ಲಿ ಜಾತಿ-ಜಾತಿಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾತ್ರ ಬರುತ್ತದೆ. ಅವರಿಗೆ ಆರಿಸುವುದು ಗೊತ್ತಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಮುಖರಾದ ಅನೀಲಕುಮಾರ ಬೆಲ್ದಾರ್ ಮಾತನಾಡಿ ಪ್ರಜ್ವಲ ರೇವಣ್ಣ ಕೇಸ್‍ನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಿ ನಾರಿಸಮಾಜದ ಮಾನ ಕಾಪಾಡಬೇಕು. ಜೊತೆಗೆ ಭಯಭೀತರಾದ ನೂರಾರು ಸಂತ್ರಸ್ತೆಯರಿಗೆ ರಾಜ್ಯಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕೆಂದು ಕರೆ ನೀಡಿದರು.
ಸಾಮಾಜಿಕ ಕಾರ್ಯಕರ್ತರಾದ ಜಗದೀಶ್ವರ ಬಿರಾದಾರ ಮಾತನಾಡಿದರು. ಎದ್ದೇಳು ಕರ್ನಾಟಕದ ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಅಶೋಕ ಮಾಳಗೆ, ಸಂದೀಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.