ಕನ್ನಡ ಸಾಹಿತ್ಯ ಪರಿಷತ್ತು ಏಕತೆ ಮತ್ತು ಅಸ್ಮಿತೆಯ ಸಂಕೇತ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.06: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಾದ ನಮ್ಮೆಲ್ಲರಿಗೂ ಏಕತೆ ಮತ್ತು ಅಸ್ಮಿತೆಯ ಸಂಕೇತವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ತಿಳಿಸಿದರು.
ಅವರು ಪಟ್ಟಣದ ಪ್ರಗತಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 110ನೇ ಕನ್ನಡ ಸಂಸ್ಥಾಪನಾ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ನಾಡಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ, ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನ ಮೂಡುವಂತೆ ಮಾಡುತ್ತಾ ಬಂದಿದೆ. ನೂರಾರು ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಬೆಳೆಸುವ ಕೆಲಸಕ್ಕೆ ಕನ್ನಡಾಭಿಮಾನಿಗಳು ಸಹಕಾರ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಬೇಕಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಎಲ್ಲರೂ ಶ್ರಮಿಸಿದಾಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ಬರುತ್ತದೆ ಎಂದರು.
ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಛಾಯಾದೇವಿ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಸವಿತಾರಮೇಶ್ ಕನ್ನಡ ನಡೆದು ಬಂದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕನ್ನಡ ನಾಗರಾಜ್ ಎಂದೇ ಪ್ರಖ್ಯಾತರಾಗಿದ್ದಂತಹ ಸಾಹಿತ್ಯ ಪರಿಚಯಕರಾದ ಕನ್ನಡ ನಾಗರಾಜ್ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್. ನಿವೃತ್ತ ಅಧ್ಯಾಪಕ ಚಾ.ಶಿ.ಜಯಕುಮಾರ್. ಪಿ.ಬಿ.ನಾಗರಾಜ್ ಪತ್ರಕರ್ತ ಕೆ.ಎಸ್.ಚಂದ್ರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಮೋನಿಕಾ .ಪ್ರಗತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ. ಕಟ್ಟೆಕ್ಯಾತನಹಳ್ಳಿ ಪಾಪಣ್ಣ,ಎಸ್.ಎನ್.ನಂಜೇಗೌಡ, ಗೌರವ ಕಾರ್ಯದರ್ಶಿ ಕಟ್ಟೆಮಹೇಶ್, ಹೋಬಳಿ ಘಟಕಗಳ ಅಧ್ಯಕ್ಷರಾದ ಆರ್.ಕೆ.ರಮೇಶ್. ವಾಸು. ಕೆ.ವಾಸು ಸೇರಿದಂತೆ ಹಲವರು ಹಾಜರಿದ್ದರು.