ಸಂತ ಜೋಸೆಫರ ವಾರ್ಷಿಕ ಹಬ್ಬ
ಸಂಜೆವಾಣಿ ವಾರ್ತೆ
ಹನೂರು ಮೇ 6 :- ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ ಸಂತ ಜೋಸೆಫರ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂತ ಜೋಸೆಫರ ಹಬ್ಬದ ಅಂಗವಾಗಿ ಬೆಳಿಗ್ಗೆ ಫಾ ಕ್ರಿಸ್ಟೋಫರ್ ಕ್ಲಾರೆಟ್ ಸೆಂಟ್ ಮೇರಿಸ್ ಪಿಯು ಕಾಲೇಜು ಮಾರ್ಟಳ್ಳಿ ಪ್ರಾಂಶುಪಾಲರು ಹಾಗೂ ಇನ್ನಿತರ ಗುರುಗಳಿಂದ ದಿವ್ಯ ಬಲಿಪೂಜೆ ನೆರವೇರಿಸಲಾಯಿತು.
ರಾತ್ರಿ ಭವ್ಯ ತೇರಿನ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು. ವಿಶೇಷವಾಗಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಭವ್ಯತೇರನ್ನು ದೇವಾಲಯದ ಸುತ್ತ ಮುತ್ತ ಮೆರವಣಿಗೆ ಮಾಡಲಾಯಿತು.
ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿ ಗೀತೆಗಳನ್ನು ಹಾಡಿದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕ್ರೈಸ್ತರು ಮೇಣದ ಬತ್ತಿಯನ್ನು ಹಿಡಿದುಕೊಂಡು ಸಾಗಿದರು. ಧರ್ಮ ಕೇಂದ್ರದ ಗುರುಗಳಾದ ಫಾದರ್ ಬಿಲವೆಂದ್ರ ಮತ್ತು ಇನ್ನಿತರು ಗುರುಗಳು ಉಪಸ್ಥಿತರಿದ್ದರು.