ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ಗೆ ಐಟೆಕ್ ನರ್ಸರಿ ಭಸ್ಮ: 10ಲಕ್ಷಕ್ಕು ಹೆಚ್ಚು ನಷ್ಟ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ. 06- ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಶಾರ್ಟ್ ಸಕ್ರ್ಯೂಟ್ ಆಗಿ, ನರ್ಸರಿಗೆ ಬೆಂಕಿಯ ಕಿಡಿ ಬಿದ್ದು ಸುಮಾರು 10 ಲಕ್ಷಕ್ಕು ಹೆಚ್ಚು ನರ್ಸರಿ ಸಾಮಗ್ರಿಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿಯ ಜಮೀನಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಶಿವಮೂರ್ತಿ ಎಂಬುವರಿಗೆ ಸೇರಿದ ಸಚಿನ್ ಐಟೆಕ್ ನರ್ಸರಿ ವಿದ್ಯುತ್ ಶಾರ್ಟ್‍ಸಕ್ರ್ಯೂಟ್‍ಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬೆಂಕಿ ಕಿಡಿ ನರ್ಸರಿಗೆ ಹಾಕಿದ್ದ ಪ್ಲಾಸ್ಟಿಕ್ ಕವರ್‍ಗೆ ಬಿದ್ದು ಸುಟ್ಟು ಹೋಗಿದ್ದರೆ, ಒಳಗೆಡೆ ಇದ್ದ 5 ಸಾವಿರ ಲೀಟರ್ ಸಾಮಥ್ರ್ಯದ 2 ನೀರಿನ ಟ್ಯಾಂಕ್, 10 ಲಕ್ಷಕ್ಕು ಹೆಚ್ಚಿನ ಟೊಮೋಟೋ, ಮೆಣಸಿನ ಕಾಯಿ, ಕೋಸು ಪೈರ್‍ಗಳು, ಫಾಲಿಥಿನ್ ಕವರ್, ಇತರೇ ನರ್ಸರಿ ಸಾಮಗ್ರಿಗಳು ಸುಟ್ಟು ಹೋಗಿದೆ.
ಶನಿವಾರ ರಾತ್ರಿ ಘಟನೆ ಸಂಭವಿಸಿದ್ದು, ವಿದ್ಯುತ್ ತಂತಿಗಳು ತಗಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಂಬಂಧಪಟ್ಟ ಸೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಮನವಿಗೆ ಸ್ಪಂದಿಸಿ, ತಕ್ಷಣ ಲೈನ್ ಅಪ್ ಮಾಡಿದ್ದರೆ ನಮ್ಮ ನರ್ಸರಿ ಉಳಿದುಕೊಳ್ಳುತಿತ್ತು ಎಂದು ರೈತ ಶಿವಮೂರ್ತಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ನರ್ಸರಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಜಿಲ್ಲಾಡಳಿತ, ಸೆಸ್ಕಾಂ ಅಧಿಕಾರಿಗಳು ಹಾಗೂ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.