ಸಿದ್ದರಾಮಯ್ಯರ ಹೇಳಿಕೆಗೆ ಕಕ್ಕರಗೊಳ್ಳದ ಜಿಬಿವಿ ಅಭಿಮಾನಿಗಳ ಬಳಗ ಆಕ್ರೋಶ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬; ದಾವಣಗೆರೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡುವ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರಿಗೆ ಮತ ಹಾಕಬೇಡಿ ಎಂಬ ಹೇಳಿಕೆಗೆ ಕಕ್ಕರಗೊಳ್ಳದ ಜಿ. ಬಿ. ವಿನಯ್ ಕುಮಾರ್ ಆತ್ಮೀಯ ಬಳಗ ಆಕ್ರೋಶ ವ್ಯಕ್ತಪಡಿಸಿದೆ.ಆವೇಶ ಭರಿತರಾಗಿ ಭಾಷಣ ಮಾಡುತ್ತಾ ಸಭಿಕರನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಅವರು ನಿಮಗೆಲ್ಲ ನಾನು ಬೇಕಾ, ಪಕ್ಷೇತರ ಅಭ್ಯರ್ಥಿಯಾದ ಜಿ. ಬಿ ವಿನಯ್ ಕುಮಾರ್ ಅವರು ಬೇಕಾ” ಎಂದು ಕೇಳಿದ್ದಲ್ಲದೆ, ನಿಮಗೆ ನಾನು ಬೇಕಾದರೆ ಜಿ. ಬಿ. ವಿನಯ್ ಕುಮಾರ್ ಗೆ ಒಂದೂ ಮತವನ್ನು ಹಾಕಬೇಡಿ ಎಂದು  ಹೇಳಿರುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದೆ.ಮುಖ್ಯಮಂತ್ರಿಗಳೇ ಒಬ್ಬ ಅಭ್ಯರ್ಥಿಯ ಹೆಸರನ್ನು ಉಲ್ಲೇಖಿಸಿ ಮತ ಹಾಕಬೇಡಿ ಎಂದು  ಹೇಳಲು ತಮಗೆ ಅಧಿಕಾರ ಕೊಟ್ಟವರು ಯಾರು? ನಿಮ್ಮ ಈ ಕರೆಯಿಂದ ಅಹಿಂದ ಸಮುದಾಯದ ನಾಯಕರೆನಿಸಿಕೊಂಡಿರುವ ತಾವು ಈ ಹಿಂದೆ ಅಹಿಂದ ಸಮುದಾಯದ ಅಸ್ತಿತ್ವವನ್ನು ಇಲ್ಲವಾಗಿಸುವ ಉದ್ದೇಶವೇ? ಎಂದು ಕಿಡಿಕಾರಿದೆ. ಒಂದು ವೇಳೆ ಅಹಿಂದ ಸಮುದಾಯದ ಸಾರ್ವಕಾಲಿಕ ಏಳಿಗೆಯನ್ನು ಬಯಸುವುದೇ ಆಗಿದ್ದರೆ, ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತಯಾಚನೆ ಮಾಡಬೇಕಿತ್ತೇ ಹೊರತು, ಇದೀಗ ತಾನೇ  ತನ್ನ ಸ್ವಂತ ಪರಿಶ್ರಮ ಹಾಗೂ ಅಹಿಂದ ಸಮುದಾಯದ ಅಭಿಮತದಿಂದ, ರಾಜಕೀಯದಲ್ಲಿ ದಾಪುಗಾಲು ಹಾಕುತ್ತಿರುವ ಮತ್ತೊಬ್ಬ ಅಹಿಂದ ಯುವ ನಾಯಕನಾಗಿ ಹೊರಹೊಮ್ಮುತ್ತಿರುವ ಜಿ.ಬಿ ವಿನಯ್ ಕುಮಾರ್ ಅವರಿಗೆ ಒಂದೂ ಮತವನ್ನು ಹಾಕಬೇಡಿ ಎಂದು ಹೇಳಿರುವುದು ಅಹಿಂದ ಸಮುದಾಯದ ದುರಾದೃಷ್ಟವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾದ ಜಿ. ಬಿ ವಿನಯ್ ಕುಮಾರ್ ಅವರಿಗೆ “ಒಂದೂ ಮತ ಹಾಕಬೇಡಿ ” ಎಂಬ ಘೋಷಣೆಯನ್ನು ವಿನಯ್ ಕುಮಾರ್ ಅವರ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸುತ್ತದೆ. ಅದೇ ರೀತಿ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತವೆ ಎಂದು ಬಳಗದ ಪ್ರಮುಖರು ತಿಳಿಸಿದ್ದಾರೆ.