300 ಹಳ್ಳಿಗಳಿಗಿಲ್ಲ ಬಸ್ ಸೌಲಭ್ಯ – ಶಿಕ್ಷಣ, ಉದ್ಯೋಗ ಕ್ರಾಂತಿಗೆ ಅವಕಾಶ ಕೊಡಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.6: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 300 ಹಳ್ಳಿಗಳಿಗೂ ಹೆಚ್ಚು ಕಡೆಗಳಲ್ಲಿ ಬಸ್ ಗಳಿಲ್ಲ. ಮೂರು ದಶಕ ಅಧಿಕಾರ ಅನುಭವಿಸಿದರು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಕೇಳಿ. ಅಭಿವೃದ್ಧಿ ಮಾಡದ ಎರಡೂ ರಾಷ್ಟ್ರೀಯ ಪಕ್ಷಗಳ ತಿರಸ್ಕರಿಸಿ. ಸ್ವಾಭಿಮಾನಿಯಾಗಿ ಕಣಕ್ಕಿಳಿದಿರುವ ನನಗೊಂದು ಅವಕಾಶ ಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಭರವಸೆ ನೀಡಿದರು.ಚನ್ನಗಿರಿ ತಾಲೂಕಿನ ಮರಡಿ, ತಣಿಗೆರೆ ಗ್ರಾಮದಲ್ಲಿ ರೋಡ್ ಶೋ ನಡೆಸಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕ್ರಾಂತಿ ಮಾಡಿ ತೋರಿಸುತ್ತೇನೆ. ಹಳ್ಳಿಗಳಲ್ಲಿ ಸೂಕ್ತ ಬಸ್ ಸೌಲಭ್ಯ ಇಲ್ಲದ ಕಾರಣ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಎಷ್ಟೋ ಮಕ್ಕಳು ಶಾಲೆ, ಕಾಲೇಜು ಅರ್ಧಕ್ಕೆ ಬಿಟ್ಟಿದ್ದಾರೆ. ಇವರ ಭವಿಷ್ಯ ಏನಾಗಬೇಕು. ಪೋಷಕರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಅಧಿಕಾರಕ್ಕೆ ಬಂದವರ ಕೈಯಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಹೊಸ ನಾಯಕತ್ವ ಸೃಷ್ಟಿ ಆಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನಿಗಳು. ಬಡಿದೆಬ್ಬಿಸುವ ಕೆಲಸ ಮಾಡಿದ್ದೇನೆ. ಯಾವುದೇ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳನ್ನು ತಂದಿಲ್ಲ. ಗೊತ್ತಿದ್ದೂ ಗೊತ್ತಿದ್ದು ಮತ ಹಾಕಬೇಕಾ ಎಂದು ಆತ್ಮಾವಲೋಕನಮಾಡಿಕೊಳ್ಳಿ ಎಂದು ಹೇಳಿದರು.ಅಭಿವೃದ್ಧಿ ತರಲ್ಲ, ಸೇವೆ ಮಾಡಲ್ಲ, ಸೌಲಭ್ಯ ಕೊಡಲ್ಲ ಎಂಬುದು ಗೊತ್ತಿದ್ದರೂ ನೀವ್ಯಾಕೆ ಮತ ನೀಡಬೇಕು. ಸತ್ಯ ನಮ್ಮ ಕಣ್ಣೆದುರಿಗೆ ಇದೆ. ಇಂಥವರಿಗೆ ಮತ ಹಾಕಿದರೆ ನಮಗೆ ನಾವು ಮಾಡಿಕೊಂಡ ವಿಶ್ವಾಸ ದ್ರೋಹ, ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಆಗುತ್ತದೆ ಎಂದರು.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ದೊಡ್ಡ ಕೈಗಾರಿಕೆಗಳಿಲ್ಲ, ಅತ್ಯುನ್ನತ ವಿದ್ಯಾ ಸಂಸ್ಥೆಗಳಿಲ್ಲ. ಎರಡು ಮನೆತನದವರ ಆಚೆಯವರು ಶಾಸಕರು, ಸಂಸದರಾಗಬೇಕು. ತಣಿಗೆರೆ ಗ್ರಾಮಕ್ಕೆ ನಾಲ್ಕೈದು ಬಾರಿ ಬಂದು ಹೋಗಿದ್ದೇನೆ. ನನ್ನಂಥ ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.