ಶೈಕ್ಷಣಿಕ ಪ್ರಗತಿ ಎಲ್ಲಾ ರೀತಿಯ ಪ್ರಗತಿಗೆ ನಾಂದಿ- ಈ.ತುಕರಾಂ
ಸಂಜೆವಾಣಿ ವಾರ್ತೆ
ಸಂಡೂರು: ಸೆ: 22: : ಶೈಕ್ಷಣಿಕವಾಗಿ ಪೂರ್ಣ ಪ್ರಗತಿಯನ್ನು ಸಾಧಿಸಲು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನೂತನ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತವಾದ ಸೌಲಭ್ಯ ಒದಗಿಸುವ ಮೂಲಕ ಶಿಕ್ಷಣದಲ್ಲಿ ಒಂದನೇ ಸ್ಥಾನಕ್ಕೆ ಬರುವಂತೆ ಎಲ್ಲರೂ ಪ್ರಯತ್ನಿಸಬೇಕು ಎಂದು ಸಂಸದ ಈ.ತುಕರಾಂ ಕರೆನೀಡಿದರು.
ಅವರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮತ್ತು ಶಾಲೆಗೆ ಬೇಕಾದ ರಸ್ತೆ ಕಾಮಗಾರಿಯನ್ನು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ದಿ ಯೋಜನೆಯ ಅಡಿಯಲ್ಲಿ 40 ಲಕ್ಷ ಮೊತ್ತದಲ್ಲಿ ರಸ್ತೆ ಕಾಮಗಾರಿಯನ್ನು ಮಾಡಲಾಗುವುದು, ಅಲ್ಲದೆ ಅತಿ ಹೆಚ್ಚು ಅನುದಾನದಲ್ಲಿ ಸುಸಜ್ಜಿತವಾದ ವಿದ್ಯಾರ್ಥಿಗಳಿಗೆ ಕೋಣೆ, ಹಾಗೂ ವಿಶೇಷ ಊಟದ ಕೋಣೆಯನ್ನು ನಿರ್ಮಿಸುವ ಮೂಲಕ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವಾಗಲಿ, ಹಾಲನ್ನು ಕುಡಿಯಲು ಸೂಕ್ತವಾದ ಡೈನಿಂಗ್ ಹಾಲ್ ವ್ಯವಸ್ಥೆಯನ್ನು ಮಾಡಲಾಗಿದೆ, ಕಾರಣ ನಂಜುಂಡಪ್ಪ ವರದಿಯ ಅನುಸಾರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಹೊರಬರಬೇಕು, ಈಗಾಗಲೇ ಅ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ, ಸಾಧನೆ ಮಾಡಿಯೇ ತಿರುತ್ತೇವೆ, ಅಲ್ಲದೆ ಇಡೀ ಬಳ್ಳಾರಿ ಕ್ಷೇತ್ರದಲ್ಲಿಯೂ ಸಹ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್, ಗಡಾದ್ ರಮೇಶ್, ಎಸ್.ವಿ. ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು, ಮುಖ್ಯಗುರುಗಳಾದ ವಾಣಿ, ಶಿಕ್ಷಕರು, ವಿದ್ಯಾರ್ಥಿಗಳು, ಬನ್ನಿ ಗ್ರಾಮದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.