ಜಿ. ಬಿ. ವಿನಯ್ ಕುಮಾರ್ ಗೆ ಮಹಿಳೆಯರ ಮಹಾಸೈನ್ಯ ಬೆಂಬಲ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬; ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರಿಗೆ ಮಹಿಳೆಯರ ಮಹಾ ಸೈನ್ಯದ ಜನಬೆಂಬಲ ವ್ಯಕ್ತವಾಗಿದೆ.ನಗರದ ಭಗತ್ ಸಿಂಗ್ ನಗರದಿಂದ ಹಲವಾರು ಬೀದಿ ಬೀದಿಗಳಲ್ಲಿ ಹಿರಿಯರು, ತಾಯಂದಿರು, ಯುವಕರು, ಯುವತಿಯರು ಸೇರಿದಂತೆ ಎಲ್ಲಾ ವರ್ಗದ ಮುಖಂಡರು ವಿನಯ್ ಕುಮಾರ್ ಅವರಿಗೆ ಸಾಥ್ ನೀಡಿದರು. ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದರು, ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ನೂರಾರು ಜನರ ಜೊತೆ ಬೃಹತ್ ಮೆರವಣಿಗೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ತೆರಳಿದ ವಿನಯ್ ಕುಮಾರ್ ಅವರಿಗೆ ಜನರು ಸಹ ಬೆಂಬಲ ಸೂಚಿಸಿದರು.ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಸ್ವಾಭಿಮಾನಿ ಯುವಕ ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು. ದಾವಣಗೆರೆ ಮಧ್ಯಕರ್ನಾಟಕದ ಕೇಂದ್ರಬಿಂದು. ದೊಡ್ಡ ದೊಡ್ಡ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಉದ್ಯೋಗ ಸೃಷ್ಟಿಸುವಂಥ ಅನೇಕ ಯೋಜನೆಗಳು ಬರಬೇಕಿತ್ತು. ಈಗಲೂ ಪ್ರಚಾರ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನೀಡುತ್ತಿರುವುದು ಕೇವಲ ಭರವಸೆ ಮಾತ್ರ. ಭರವಸೆ ಭರವಸೆಯಾಗಿಯೇ ಉಳಿದಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದರು.ಬದಲಾವಣೆಯ ಗಾಳಿ ಜಿಲ್ಲೆಯಲ್ಲಿ ಬೀಸುತ್ತಿದೆ. ಗ್ರಾಮ ಗ್ರಾಮಗಳಲ್ಲಿಯೂ ಸಿಲಿಂಡರ್ ಸದ್ದು ಮಾಡುತ್ತಿದೆ. ನಗರ ಪ್ರದೇಶದ ಜನರು ಸಹ ಹೋದ ಕಡೆಗಳಲ್ಲಿ ನಿಮ್ಮ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ನೀವು ಮುನ್ನಡೆಯಿರಿ, ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನೀವು ಗೆದ್ದರೆ ಇತಿಹಾಸ ಸೃಷ್ಟಿಯಾಗುವುದು ಖಚಿತ ಎಂಬುದು ಪ್ರಜ್ಞಾವಂತರ ಮಾತು ಎಂದರು.ಮೂರು ದಶಕಗಳ ಕಾಲ ಅಧಿಕಾರ ನಡೆಸಿದವರು ಕೇವಲ ಅಧಿಕಾರ ದಾಹಕ್ಕಾಗಿ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ನನ್ನದು ಅಭಿವೃದ್ಧಿಗಾಗಿ ಕಟ್ಟಿಕೊಂಡಿರುವ ಕನಸು. ಈ ಕನಸು ನನಸಾಗಬೇಕಾದರೆ ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.ನನ್ನ ಕ್ರಮ ಸಂಖ್ಯೆ 28, ಚಿಹ್ನೆ ಗ್ಯಾಸ್ ಸಿಲಿಂಡರ್. ಪ್ರತಿಯೊಂದು ಮನೆಯಲ್ಲಿಯೂ ಇಂದು ಗ್ಯಾಸ್ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಮಹಿಳೆಯರು, ಯುವತಿಯರು ತೋರುತ್ತಿರುವ ಬೆಂಬಲ ಆತ್ಮವಿಶ್ವಾಸ ಮತ್ತಷ್ಟು ಇಮ್ಮುಡಿಗೊಳಿಸುವ ಜೊತೆಗೆ ನನಗೆ ಮತ ನೀಡುತ್ತಾರೆ ಎಂಬ ಭರವಸೆ ಇದೆ. ಪ್ರಜಾಪ್ರಭುತ್ವ, ಸಂವಿಧಾನ ಗೆಲ್ಲಲು ನಿಂತಿರುವ ಚುನಾವಣೆ ಎಂದರು.ಸಾಮಾನ್ಯ ಕುಟುಂಬದಿಂದ ಬಂದ ಯುವಕನೊಬ್ಬ ಪಾರ್ಲಿಮೆಂಟ್ ಗೆ ಕಳುಹಿಸಿಕೊಡುವ ಅವಕಾಶ ಇದೆ. ಈ ಅವಕಾಶ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ನನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ಭಾರತ ದೇಶದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಎಂ. ಸಿದ್ದೇಶ್ವರ ಅವರು ದಾವಣಗೆರೆ ಜಿಲ್ಲೆಗೆ ನೀಡಿರುವ ಕೊಡುಗೆಗಿಂತ ಅವರ ಕುಟುಂಬಗಳು ಆಸ್ತಿ, ಅಂತಸ್ತು ಮಾಡಿಕೊಂಡಿರುವುದೇ ಹೆಚ್ಚು ಎಂಬುದು ಜನರ ಮಾತು. ಹೋದ ಕಡೆಗಳಲ್ಲಿ ಜನರುಕುಟುಂಬ ರಾಜಕಾರಣ ನೋಡಿ ಸಾಕು ಸಾಕಾಗಿ ಹೋಗಿದೆ. ಮಾವ ಶಾಸಕ, ಪತಿ ಸಚಿವ ಸ್ಥಾನ ಇದ್ದರೂ ಅದೇ ಮನೆಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಜಿ. ಎಂ. ಸಿದ್ದೇಶ್ವರರ ತಂದೆ, ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದೆ. ಈ ಎರಡು ಕುಟುಂಬಗಳಿಗೆ ಮಾತ್ರ ಅಧಿಕಾರ ಸೀಮಿತವಾಗಿದೆ. ಚುನಾವಣೆ ವೇಳೆ ಬಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಆಮೇಲೆ ಕೈಗೆ ಸಿಗುವುದಿಲ್ಲ. ಮನೆ ಮುಂದೆ ಹೋಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿರುವುದು ಜನರಿಗೂ ಬೇಸರ ಮತ್ತು ಒಳಗೊಳಗೆ ಆಕ್ರೋಶ ತರಿಸಿದೆ ಎಂದು ತಿಳಿಸಿದರು.ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಇಂದು ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ. ಇದಕ್ಕೆ ಅಂತ್ಯ ಹಾಡುವ ಸುವರ್ಣಾವಕಾಶ ಸ್ವಾಭಿಮಾನಿ ದಾವಣಗೆರೆ ಜನರಿಗೆ ಲಭಿಸಿದೆ. ಈಗಿನ ಅಲೆ ನೋಡುತ್ತಾ ಹೋದರೆ ಬಿಜೆಪಿ ಹಾಗೂ ಕಾಂಗ್ರೆಸ್ ಗಿಂತ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಕನಿಷ್ಠ 15 ರಿಂದ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ನಿತ್ಯವೂ ಮನೆಗೆ ಸಾವಿರಾರು ಜನರು ಬರುತ್ತಾರೆ. ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮ ಸಮಸ್ಯೆ ಪರಿಹರಿಸುವವರು, ಕೈಗೆ ಸಿಗುವರು ಬೇಕು ಎಂದು ಹೇಳುತ್ತಿದ್ದಾರೆ. ಜನಾಭಿಪ್ರಾಯ, ಜನಾಶಯಕ್ಕೆ ತಕ್ಕಂತೆ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮೇಲೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ವಿನಯ್ ಕುಮಾರ್ ಹೇಳಿದರು.