ಗೆಲ್ಲಲಿ, ಸೋಲಲಿ ನಾನೆಲ್ಲೂ ಹೋಗಲ್ಲ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಮನೆಮಗನ ಗೆಲ್ಲಿಸಿ: ಜಿ. ಬಿ. ವಿನಯ್ ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೩; ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲಲಿ, ಸೋಲಲಿ. ನಾನೆಲ್ಲೂ ಹೋಗಲ್ಲ. ನಿಮ್ಮ ಸೇವೆಗೆ ಸದಾ ಬದ್ಧನಿರುತ್ತೇನೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ, ನಿಮ್ಮ ಮನೆಮಗನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.ಹರಿಹರ ಪಟ್ಟಣದಲ್ಲಿ ಸಾವಿರಾರು ಜನರ ಜೊತೆ ರೋಡ್ ಶೋ ನಡೆಸಿ ಗಾಂಧಿವೃತ್ತದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಒಂದೆಡೆಯಾದರೆ ದಾವಣಗೆರೆಯ ಕ್ಷೇತ್ರದ ಚುನಾವಣೆ ಕಣವೇ ಬೇರೆ. ಇಲ್ಲಿ ಜನಸಾಮಾನ್ಯರಿಗೆ ಅವಕಾಶಗಳಿಲ್ಲ, ಸ್ವಾತಂತ್ರ್ಯವಿಲ್ಲ. ಪಾಳೇಗಾರಿಕೆ ಸಂಸ್ಕೃತಿ,  ದೌರ್ಜನ್ಯ,  ದಬ್ಬಾಳಿಕೆ ಜೊತೆಗೆ ಎಲ್ಲಾ ಅಧಿಕಾರದ ಸ್ಥಾನಗಳಲ್ಲಿ ನಾವೇ ಇರಬೇಕೆಂಬ ಸಂಕುಚಿತದ ಭಾವನೆ ಇದೆ. ಸಾಮಾನ್ಯ ಜನರು ಕೇವಲ ಕೇವಲ ಮತ ಹಾಕಲುಅಷ್ಟೇ ಇರುವುದು ಎಂಬ ಮನೋಭಾವನೆ ಹೊಂದಿರುವವರಿಗೆ ತಕ್ಕ ಪಾಠ ಕಲಿಸಿ. ಈ ಸಾಮ್ರಾಜ್ಯಶಾಹಿತನಕ್ಕೆ ಸೆಡ್ಡು ಹೊಡೆದು ಸ್ವಾಭಿಮಾನಿ ಜನರ ಪರವಾಗಿ ನಿಂತಿದ್ದೇನೆ ಎಂದರು.