ಸಮ ಸಮಾಜದ ಪಿತಾಮಹ ವಿಶ್ವಗುರು ಬಸವಣ್ಣ : ಶ್ರೀ ಬಸವಪ್ರಭು ಸ್ವಾಮೀಜಿ

ಸಂಜೆವಾಣಿ ವಾರ್ತೆ
ದಾವಣಗೆರೆ, ಮೇ 5: ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ ಮಾನವತವಾವಾದಿ ಎಂದರೆ ಅದು 12ನೇ ಶತಮಾನದ ಬಸವಣ್ಣನವರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ವಿರಕ್ತಮಠದಲ್ಲಿ  ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ(ವೀರಶೈವ) ತರುಣ ಸಂಘದ ಸಹಯೋಗದಲ್ಲಿ 112ನೇ ಬಸವ ಜಯಂತ್ಯೋತ್ಸವದ ಅಂಗವಾಗಿ ನಡೆದ  108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸವ ತತ್ವಗಳ ಪಾಲನೆಯಿಂದ ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಕಾಯಕ ತತ್ವ, ದಾಸೋಹ ತತ್ವದಿಂದ, ಬಸವ ತತ್ವ ಪಾಲನೆಯಿಂದ ದೇಶದ ಉದ್ಧಾರ ಸಾಧ್ಯ. ಇಂತಹ ತತ್ವಗಳನ್ನು ಪ್ರತಿಯೊಬ್ಬರೂ ಕೂಡಾ ಆಚರಣೆ ಮಾಡೋಣ. ಇಂತಹ ತತ್ವಗಳನ್ನು ಮನೆ ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ 108 ವರ್ಷಗಳಿಂದ ಈ ದಾವಣಗೆರೆಯ ವಿರಕ್ತಮಠದಿಂದ ಬಸವ ಪ್ರಭಾತ್ ಪೇರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.  ಬಸವ ಜಯಂತಿ ಆಚರಣೆ 1913ರಲ್ಲಿ ಮೊಟ್ಟಮೊದಲು ಪ್ರಾರಂಭವಾಗಿದ್ದು ದಾವಣಗೆರೆಯ ವಿರಕ್ತಮಠದಿಂದ. ಈ ಬಸವ ಪ್ರಭಾತ್ ಪೇರಿ ಆರಂಭವಾಗಲು ಕಾರಣ ಹರ್ಡೆಕರ್ ಮಂಜಪ್ಪನವರು, ಜಯದೇವ ಜಗದ್ಗುರುಗಳು, ಮೃತ್ಯುಂಜಯ ಅಪ್ಪಗಳು. ಅಂದಿನ ಬ್ರಿಟೀಷರ ಕಾಲದಲ್ಲಿ ಯಾರೂ ಸಹಾ ಜನರು ಸೇರುವಂತಿರಲಿಲ್ಲ. ಜನ ಸೇರಿ ಸಭೆ ನಡೆಸಿದರೂ ಎಂದರೆ ಬ್ರಿಟೀಷರು ಗುಂಡೇಟಿಗೆ ಬಲಿ ಆಗಬೇಕಿತ್ತು. ಇವರೆಲ್ಲ ಒಗ್ಗಟ್ಟಾದರೂ ಎಂದರೆ ಇವರಿಗೆ ಸ್ವಾತಂತ್ರö್ಯ ಕೊಡಬೇಕು ಎಂದು ಯಾರಿಗೂ ಒಗ್ಗಟ್ಟಾಗಿ ಇರಲು ಬಿಡುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಮಹಾರಾಷ್ಟçದಲ್ಲಿ ಬಾಲಗಂಗಾಧರ ತಿಲಕ್ ಅವರು ಗಣೇಶನ ಹಬ್ಬ ಮಾಡಿ ಸಾವಿರಾರು ಜನರನ್ನು ಸೇರಿಸಿ ಸ್ವಾತಂತ್ರö್ಯ ಚಳುವಳಿಗೆ ಜನರನ್ನು ಸಂಘಟನೆ ಮಾಡಿದರು. ಅದೇ ರೀತಿ 1917ರಲ್ಲಿ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿಯನ್ನು ಆರಂಭಿಸಿದರು ಎಂದರು.