ದೇಶಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಿ ಹೊಸ ಆಡಳಿತ ತನ್ನಿ; ಪ್ರಿಯಾಂಕ ವಾದ್ರಾ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೫; ಪ್ರಸ್ತುತ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಅವಕಾಶ ಬಂದಿದ್ದು, ಸಾರ್ವಜನಿಕರ ಕೆಲಸ ಮಾಡುವಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡೋಣ. ದೇಶಕ್ಕೆ ಈಗ ನೆಹರು, ಶಾಸ್ತ್ರೀಜಿಯವರಂತಹ ಪ್ರಧಾನಿಯ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಅಭಿಪ್ರಾಯಪಟ್ಟರು.ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಮತ ಯಾಚಿಸಿ ಅವರು ಮಾತನಾಡಿದರು.ಮೋದಿಯ ಹತ್ತು ವರ್ಷದ ಆಡಳಿತದ ಬಳಿಕ ಸಾಧನೆಗಳ ಮೂಲಕ ಮತಕೇಳಬೇಕು. ಆದರೆ ಯಾವ ಸಾಧನೆಯೂ ಇಲ್ಲ. ಈಗ ಸಮಯ ಬಂದಿದೆ.ದೇಶಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಿ ಹೊಸ ಆಡಳಿತ ತನ್ನಿ. ದೇಶ ನಿಮ್ಮದು. ಇದು ನಿಮ್ಮ ಜವಾಬ್ದಾರಿ ಭವಿಷ್ಯದ ದೃಷ್ಠಿಯಿಂದ ಕಾಂಗ್ರೆಸ್ ಗೆ ಮತ ನೀಡಿ. ನಿಮ್ಮ ಕಷ್ಟದ ಬಗ್ಗೆ ಯೋಚಿಸಿ ಮತ ಹಾಕಿರಿ ಎಂದು ಕರೆ ನೀಡಿದರು. ಹತ್ತು ವರ್ಷದ ಆಡಳಿತದಲ್ಲಿ ಜನ ಜೀವನ ಸುಧಾರಿಸಿದೆಯೇ.ಉದ್ಯೋಗ ಸಿಕ್ಕಿದೆಯೇ ಜೀವನ ಸುಧಾರಿಸಿಲ್ಲ ಮತ್ತಷ್ಟೂ ಸಂಕಷ್ಟ ಹೆಚ್ಚಾಗಿದೆ.ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಿಜೆಪಿ ಪಕ್ಷ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ.ಇದರ ಜೊತೆಗೆ  ಹದಿನಾರು ಲಕ್ಷ ಕೋಟಿ ರೂ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಒಂದು ಕಡೆ ಬಿಜೆಪಿ ಪಕ್ಷಕ್ಕೆ ಕಾಸು ಸಂಗ್ರಹಣೆ ಮಾಡಿದರೆ, ಇನ್ನೊಂದು ಕಡೆ ಸಾಮಾನ್ಯ ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡದೆ ಶ್ರೀಮಂತರ ಸಾಲಮನ್ನಾ ಆಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.