ಪತ್ನಿ ಗಾಯತ್ರಿ ಪರ ಅಬ್ಬರದ ಪ್ರಚಾರ : ತ್ಯಾವಣಗಿಯಲ್ಲಿ ಬಹಿರಂಗ ಸಭೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬ : ಚುನಾವಣೆ ಬಂದಾಗ 5 ವರ್ಷಕ್ಕೊಮ್ಮೆ ನಿಮ್ಮ ಬಳಿ ಬಂದು ಮತ ಕೇಳುವವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಂಸದ ಜಿ.ಎಂ.ಸಿದ್ದೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಕ್ಕೊಮ್ಮೆ ನಿಮ್ಮ ಬಳಿ ಬರುವವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ನಿಮ್ಮ ಜೊತೆಯಲ್ಲಿದ್ದು, ನಿಮ್ಮ ಕಷ್ಟ ಸುಖಗಳಿಗೆ ಭಾಗಿಯಾಗುವ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ನಿಮ್ಮ ಅಮೂಲ್ಯ ಮತಗಳನ್ನು ನೀಡಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ಅಭ್ಯರ್ಥಿ ಸೋಲುವ ಭೀತಿಯಿಂದ ಕ್ಷೇತ್ರದ ತುಂಬ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ 4 ಚುನಾವಣೆಯಿಂದ ಇದೇ ಕೆಲಸ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ವಾರಂಟಿಯೇ ಇಲ್ಲದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ಗಳನ್ನು ಹಂಚುತ್ತಿದೆ. ಇಡೀ ದೇಶದಲ್ಲಿ ಕೇವಲ 230 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿರುವ ಕಾಂಗ್ರಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಲು 272 ಜನ ಸಂಸದರು ಬೇಕು ಎನ್ನುವ ಪರಿಜ್ಞಾನವೇ ಇಲ್ಲ. ದೇಶದಲ್ಲಿ 20 ರಿಂದ 30 ಸೀಟು ಗೆಲ್ಲುವ ಕಾಂಗ್ರೆಸ್ ಜನರಿಗೆ ಗ್ಯಾರಂಟಿಗಳ ಮೂಲಕ ಟೋಪಿ ಹಾಕಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.20 ವರ್ಷಗಳ ಕಾಲ ಸಂಸದರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ಧಾರೆ ಎಂದು ಪ್ರಶ್ನಿಸುವ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದ ತುಂಬ ಓಡಾಡಿ, ನೋಡಿಕೊಂಡು ಬರಲಿ. 5 ವರ್ಷಕ್ಕೊಮ್ಮೆ ಮಾತ್ರ ಹೊರಗೆ ಬರುವವರಿಗೆ ನಾವು ಮಾಡಿರುವ ಕೆಲಸಗಳು ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪತಿ ರಾತ್ರಿ 2 ಗಂಟೆವರೆಗೂ ಎಚ್ಚರ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಕ್ಷೇತ್ರದ ಜನರ ಕೆಲಸ ಕಾರ್ಯಗಳನ್ನು ಕೇಳಲು ಅಷ್ಟೋತ್ತಿನಲ್ಲಿ ಹೊರಗೆ ಹೋಗುವುದಕ್ಕೆ ಆಗುತ್ತದೆಯೇ…? ಎಂದರು. 2014 ರಲ್ಲಿ ದೇಶದ ಜನ ಮಾತ್ರ ಮೋದಿ ಜೀ ಅವರನ್ನು ಇಷ್ಟಪಡುತ್ತಿದ್ದರು. ಈಗ ಇಡೀ ಪ್ರಪಂಚವೇ ಮೋದಿ ಜೀ ಅವರನ್ನುಇಷ್ಟ ಪಡುತ್ತಿದೆ. ಈ ಕಾರಣಕ್ಕಾಗಿಯೇ ಮೋದಿ ಜೀ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ಕರೆ ನೀಡಿದರು.ಕಳೆದ 10 ವರ್ಷಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ಧಾರಿ, ಆರೋಗ್ಯ ಕ್ಷೇತ್ರ ಸೇರಿದಂತೆ ರೈತರ ಕಲ್ಯಾಣ, ಮಹಿಳಾ ಸಬಲೀಕರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಆಗಿವೆ. ಕಾಂಗ್ರೆಸ್ಸಿಗರು ಕಪ್ಪು ಕನ್ನಡಕ ಹಾಕಿಕೊಂಡು ನೋಡಿದರೆ ನಾವು ಮಾಡಿರುವ ಕೆಲಸಗಳು ಕಾಣುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೇ 7 ರ ಮಂಗಳವಾರ ನಡೆಯುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1, ಕಮಲದ ಗುರುತಿಗೆ ಮತ ನೀಡುವ ಮೂಲಕ ಗಾಯಿತ್ರಿ ಸಿದ್ದೇಶ್ವರ ಅವರನ್ನು ಅತ್ಯಾಧಿಕ ಮತಗಳಿಂದ ಆರಿಸಿ ದೆಹಲಿಗೆ ಕಳುಹಿಸಿ ಎಂದು ಮನವಿ ಮಾಡಿದರು.