ಸಾಮಾನ್ಯ ಜನರು ನನ್ನ ಗಾಢ್ ಫಾದರ್, ಗೆದ್ದರೆ ಸ್ವಾಭಿಮಾನಕ್ಕೆ ಜಯ ಸಿಕ್ಕಂತೆ: ಜಿ. ಬಿ. ವಿನಯ್ ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬; ರಾಜಕಾರಣದಲ್ಲಿ ನನಗೆ ಯಾರೂ ಗಾಢ್ ಫಾದರ್ ಇಲ್ಲ. ಜನಸಾಮಾನ್ಯರೇ ನನ್ನ ಗಾಢ್ ಫಾದರ್. ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸ್ವಾಭಿಮಾನಿಗಳಿಗೆ ಗೆಲುವು ಸಿಕ್ಕಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.ಹರಪನಹಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಮಾನ್ಯರಿಂದ ಸಾಮಾನ್ಯರಿಗಾಗಿ ಸಾಮಾನ್ಯರಿಗೋಸ್ಕರ ನಡೆಸುತ್ತಿರುವ ಚುನಾವಣೆ ಇದು. ದೊಡ್ಡ ನಾಯಕರು ಯಾರೂ ನನ್ನ ಹಿಂದೆ ಇಲ್ಲ. ನನ್ನ ಜೊತೆಗಿರುವುದು ಸ್ವಾಭಿಮಾನಿಗಳು. ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲೇಬೇಕೆಂದು ಪಣ ತೊಟ್ಟಿರುವ ಜನರು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ನಾವು ಸ್ವಾಭಿಮಾನಿಗಳು ಎಂದು ಸಾಬೀತುಪಡಿಸುತ್ತಾರೆ ಎಂದರು.ಇಲ್ಲಿ ಸೇರಿರುವ ಸಾವಿರಾರು ಸಂಖ್ಯೆಯಲ್ಲಿರುವ ಜನರು ಚಿತ್ರನಟರಿಗೆ ಕಾಯುತ್ತಿಲ್ಲ. ಇಲ್ಲಿಗೆ ಸ್ಟಾರ್ ಪ್ರಚಾರಕರಾದ ದರ್ಶನ್ ತೂಗುದೀಪ, ಸುದೀಪ್ ಬರುವುದಿಲ್ಲ. ಇಲ್ಲಿಗೆ ಬಂದಿರುವುದು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಸಾಮಾನ್ಯ ಯುವಕ. ನಾನು ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿದ್ದು, ನೀವೂ ಸ್ವಾಭಿಮಾನಿಗಳಾಗಿ ಮತಚಲಾಯಿಸಿ. ಕನಿಷ್ಠ ಎಂದರೆ ಒಬ್ಬರು 300ರಿಂದ 400 ಮತಗಳನ್ನು ನನಗೆ ಹಾಕಿಸಿ. ಕ್ರಮ ಸಂಖ್ಯೆ 28, ಗ್ಯಾಸ್ ಸಿಲಿಂಡರ್ ಗೆ ಅಮೂಲ್ಯ ಮತ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು.ನಾನು ವಿದ್ಯಾವಂತ. ನನಗೂ ಭಾಷಾ ನೈಪುಣ್ಯತೆ ಇದೆ. ಲೋಕಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುವ ಸಾಮರ್ಥ್ಯ ಇದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಹೇಳಬಲ್ಲೆ. ನಾನು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದೇನೆ. ಬಡತನ ಗೊತ್ತಿದೆ. ಜನಸಾಮಾನ್ಯರ ಸಂಕಷ್ಟವನ್ನೂ ಕಂಡಿದ್ದೇನೆ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದಿಂದ ಬಂದವನು. ನಿಮ್ಮ ಮನೆ ಮಗ ಗೆದ್ದರೆ ಅಭಿವೃದ್ಧಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಹೇಳಿದರು.ಇಷ್ಟು ವರ್ಷಗಳ ಕಾಲ ಸ್ವಾಭಿಮಾನವನ್ನು ಮನಸ್ಸಿನಲ್ಲಿಯೇ ಹಿಡಿದುಕೊಟ್ಟುಕೊಂಡು ಯಾರಿಗಾದರೂ ಮತ ಹಾಕಬಹುದಿತ್ತು. ಈ ಬಾರಿ ಮೂರನೇ ಆಯ್ಕೆ ನಿಮ್ಮ ಮುಂದೆ ಇದೆ. ಈ ಚುನಾವಣೆಯಲ್ಲಿ ಸಾಮಾನ್ಯ ಯುವಕ ಜನಾಭಿಪ್ರಾಯ ಸಂಗ್ರಹಿಸಿ ಅವರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದೇನೆ. ದೊಡ್ಡ ಕನಸು ಕಂಡಿದ್ದೇನೆ ಎಂದು ಹೇಳಿದರು.ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಅನ್ನು ಬಹಳ ಯಶಸ್ವಿಯಾಗಿ ಬೆಳೆಸಿದ್ದೇನೆ. ಇಡೀ ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೋಚಿಂಗ್ ನೀಡುವ ಸಂಸ್ಥೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. 15 ದಿನದ ಹಿಂದೆ ಫಲಿತಾಂಶ ಬಂತು. 150ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ನಮ್ಮ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಇದು ಗ್ರಾಮ ಗ್ರಾಮಗಳಲ್ಲಿಯೂ ಆಗಬೇಕು. ಬಡವರ ಮಕ್ಕಳು ಉನ್ನತ ಉದ್ಯೋಗಕ್ಕೆ ಹೋಗಬೇಕು ಎಂಬ ಅಭಿಲಾಷೆ ನನ್ನದು ಎಂದು ತಿಳಿಸಿದರು.ನನ್ನೂರಿನ ಶಾಲೆಯಲ್ಲಿ ಪಡೆಯುವ ಶಿಕ್ಷಣ ಚೆನ್ನಾಗಿರಬೇಕು. ಆದ್ರೆ, ಮೂರು ದಶಕಗಳಲ್ಲಿ ಶಾಲೆಗಳ ಅಭಿವೃದ್ಧಿ ಆಗಿಲ್ಲ. ಗುಣಮಟ್ಟದ ಶಿಕ್ಷಣ ಸಿಕ್ಕಿದ್ದರೆ, ಗ್ರಾಮೀಣ ಭಾಗದ ಮಕ್ಕಳು ವೈದ್ಯರು, ಎಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಿದ್ದರು. ಜನರ ಬದುಕು ಹಸನಾಗುತಿತ್ತು. ಆದ್ರೆ, ಈ ಕೆಲಸ ಮಾಡುವ ಇಚ್ಚಾಶಕ್ತಿ, ಆಸಕ್ತಿ, ಜನಪರ ಕಾಳಜಿ, ಸಮಾಜ ಸೇವೆ ಮಾಡುವ ಅಭಿಲಾಷೆ ಅಧಿಕಾರದಲ್ಲಿದ್ದವರಿಗೆ ಇರಲಿಲ್ಲ ಎಂದು ಹೇಳಿದರು.ದಾವಣಗೆರೆ ಜಿಲ್ಲೆಗೆ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತಂದು ಉದ್ಯೋಗಾವಕಾಶ ಸೃಷ್ಟಿಸಿ ಯುವಕ, ಯುವತಿಯರಿಗೆ ಉದ್ಯೋಗ ಸಿಗಬೇಕು. ಜಿಲ್ಲೆಯ ಕೆಲ ತಾಲೂಕುಗಳಲ್ಲಿನ ಜನರು ಗುಳೆ ಹೋಗುತ್ತಿದ್ದು ಇದನ್ನು ತಪ್ಪಿಸಬೇಕಿದೆ. ಇಲ್ಲಿಯೇ ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಪಾರ್ಕ್, ಕೈಗಾರಿಕಾ ಕಾರಿಡಾರ್, ಉದ್ಯೋಗ ಸೃಷ್ಟಿಸುವಂಥ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ಕೈಗಾರಿಕೆಗಳನ್ನು ತರುತ್ತೇನೆ ಎಂದು ಭರವಸೆ ನೀಡಿದರು.ಕ್ರೀಡೆಗೆ ವಿಶೇಷ ಆದ್ಯತೆ ನೀಡಲಾಗುವುದು. ಕುಸ್ತಿಪಟುಗಳು ಹೆಚ್ಚಿದ್ದು, ಅವರಿಗೆ ಸೂಕ್ತ ಸೌಲಭ್ಯವುಳ್ಳ ಗರಡಿಮನೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಮಹಿಳೆಯರ ಬದುಕು ಹಸನಾಗಿಸಲು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ನನಗೆ ಒಂದು ಅವಕಾಶ ಕೊಟ್ಟು ನೋಡಿ. ಆಮೇಲೆ ನೀವೇ ಹೇಳುತ್ತೀರಾ. ಹೇಗೆ ಕೆಲಸ ಮಾಡಿದೆ ಎಂದು. ಕಾಂಗ್ರೆಸ್, ಬಿಜೆಪಿ ಹಾಗೂ ನನ್ನ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜನರೂ ದಿನ ಕಳೆದಂತೆ ಕೊಡುತ್ತಿರುವ ಬೆಂಬಲ ನೋಡಿದರೆ, ಹೋದ ಕಡೆಗಳಲ್ಲಿ ಜನರು ಸೇರುತ್ತಿರುವುದನ್ನು ನೋಡಿದರೆ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ಮೂಡಿದೆ ಎಂದು ತಿಳಿಸಿದರು.