ಸಿಎಂ ಸಿದ್ದರಾಮಯ್ಯರು ನನಗೆ ಬೈಯ್ದರೂ ಆಶೀರ್ವಾದ ಇದ್ದಂತೆ: ಜಿ. ಬಿ. ವಿನಯ್ ಕುಮಾರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೬: ಸಿಎಂ ಸಿದ್ದರಾಮಯ್ಯರ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಒಂದು ವರ್ಷದ ರಾಜಕಾರಣದಲ್ಲಿ ಇಷ್ಟು ಹೆಸರು ಮಾಡಲು ಅವರೂ ಸಹ ಪ್ರಮುಖ ಕಾರಣ. ನಾನು ಇಲ್ಲಿ ಹೋರಾಟ ಮಾಡಿದ್ದೇನೆ. ಎಐಸಿಸಿ ಮಟ್ಟದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿಕೆ ವಿಚಾರದಲ್ಲಿ ನನ್ನ ಹೆಸರು ಪ್ರಸ್ತಾಪವಾಗಲು ಸಿಎಂ ಅವರ ಸಹಕಾರ ಇದ್ದರಿಂದಲೇ ಆಗಿದ್ದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಸಿಎಂ ಹೇಳುವುದರಲ್ಲಿ ತಪ್ಪೇನಿಲ್ಲ. ರಾಜಕಾರಣದಲ್ಲಿ ತಂತ್ರ – ಪ್ರತಿತಂತ್ರ ಇದ್ದೇ ಇರುತ್ತದೆ. ನನ್ನ ಪ್ರಕಾರ ಅಹಿಂದ ವರ್ಗದವರು ನನಗೆಮತ ನೀಡಿದರೆ ನಾನು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ವಿನಯ್ ಕುಮಾರ್ ಒಂದು ವೇಳೆ ಗೆದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏನೂ ಕೆಲಸ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದೂ ಹೇಳಿದ್ದಾರೆ. ಇದು ನನಗೆ ಆಶೀರ್ವಾದವೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.ನಾನು ಮೋದಿ ಅವರ ಬಳಿ ಕೆಲಸ ಕೇಳಲು ಹೋಗಲ್ಲ. ಸಂಸದನಾದರೆ ಅವರ ಬಳಿಯೇ ಅನುದಾನ ಕೇಳಬೇಕು ಎಂದೇನಿಲ್ಲ. ನಾನು ಈಗಲೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ನಾಲ್ಕು ದಿನಗಳು ಆದ ಬಳಿಕ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆಯಲ್ಲಿಯೇಮುಂದುವರಿಯುತ್ತಿದ್ದೇನೆ. ಆದರೆ, ಯಾವುದೇ ಸರ್ಕಾರ ಇರಲಿ, ಬರಲಿ. ಕೇಂದ್ರ ಸರ್ಕಾರದ ಅನುದಾನದ ತಂದು ಹೇಗೆ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುದು ನನಗೆ ಗೊತ್ತು. ನನಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಆಗುವುದಿಲ್ಲ ಎಂದು ಹೇಳಿದರು.