ಲೋಕಸಭಾ ಸಾರ್ವತ್ರಿಕ ಚುನಾವಣೆ: ಮೇ 5ರ ಸಂಜೆ 6 ಗಂಟೆಯ ನಂತರಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ಹಾಗೂ ಡಿಜೆಮತ್ತು ಡಾಲ್ಬಿ ಧ್ವನಿವರ್ಧಗಳ ಬಳಕೆ ನಿಷೇಧಿಸಿ ಡಿ.ಸಿ. ಆದೇಶ
ಕಲಬುರಗಿ:ಮೇ.05:05-ಗುಲಬರ್ಗಾ (ಪ.ಜಾ.) ಲೋಕಸಭಾ ಸಾರ್ವತ್ರಿಕ ಚುನಾವಾಣೆ-2024 ಸಂಬಂಧ ಇದೇ ಮೇ 7 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯವಾಗುವ ಸಮಯದ 48 ಗಂಟೆಗಳ ಮುಂಚಿತವಾಗಿ ಅಂದರೆ ಮೇ 5ರ ಸಂಜೆ 6 ಗಂಟೆಯ ನಂತರ (ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ) ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಚುನಾವಣಾ ಏಜೆಂಟ್‍ರು ಮತ್ತು ಬೆಂಬಲಿಗರು ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸುವುದನ್ನು ಹಾಗೂ ಡಿಜೆ ಮತ್ತು ಡಾಲ್ಬಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಸಿ.ಆರ್.ಪಿ.ಸಿ. ಸೆಕ್ಷನ್ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಕ್ಷೇತ್ರದ ಹೊರಗಿನಿಂದ ಬಂದಂತಹ ಹಾಗೂ ಈ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ ಕ್ಷೇತ್ರದಲ್ಲಿ ಉಳಿಯದೇ ತಮ್ಮ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿಯೇ ವಾಸ್ತವ್ಯವಿರಬೇಕು. ಅದೇ ರೀತಿ ಮೇ 5 ರ ಸಂಜೆ 6 ಗಂಟೆಯಿಂದ ಮೇ 7ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಸ್ಟೀಕರ್, ಡಿಜೆ, ಡಾಲ್ಬಿ ಹಾಗೂ ಧ್ವನಿವರ್ಧಕಗಳನ್ನು (ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ಹಾಗೂ 36 ರಡಿ) ನಿಷೇಧಿಸಿ ಅವರು ಆದೇಶ ಹೊಡಿಸಿದ್ದಾರೆ.
ಕಲಬುರಗಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಅವರು ನಿರ್ದೇಶಿಸಿದ್ದಾರೆ.