ಮೋದಿ ಧರ್ಮಗಳ ಮೇಲೆ ಚುನಾವಣೆಗೆ ಹೊರಟಿದ್ದಾರೆ: ಹರಿಪ್ರಸಾದ್
ಹುಬ್ಬಳ್ಳಿ,ಮೇ.5: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾವು ಮಾಡಿದ ಸಾಧನೆ ಬಗ್ಗೆ ಹೇಳಲಿಕ್ಕೆ ಆಗುವುದಿಲ್ಲ ಆದ್ದರಿಂದ ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಸಂವಿಧಾನ ಧರ್ಮ ಗ್ರಂಥ ಎಂದು ಜಾಹೀರಾತುಗಳನ್ನು ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಸ್.ಸಿ, ಎಸ್.ಟಿ ಮೀಸಲಾತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ ಅವರೊಬ್ಬ ಸುಳ್ಳಿನ ಸರ್ದಾರ ಎಂದು ಟೀಕಿಸಿದರು..
ಮೋದಿಯವರು ಮುಂದಿನ 5 ವರ್ಷಗಳ ಕಾಲ ಏನು ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಏಕೆ ಹೇಳಿಲ್ಲ? ಈ ಹಿಂದೆ ಏನು ಮಾಡಿದ್ದೇವೆಂದು ಸಹ ಹೇಳಿಲ್ಲ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಟೊಳ್ಳು ಭರವಸೆಗಳೇ ಇವೆ. ಅವರದು ಇದು ಅಮೃತ ಕಾಲ ಅಲ್ಲ, ಅನ್ಯಾಯದ ಕಾಲ ಎಂದು ಕಿಡಿಕಾರಿದ ಅವರು, 5 ನ್ಯಾಯ ಪತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆ ಆದರೆ ಹತ್ತು ವರ್ಷಗಳಲ್ಲಿ ಮೋದಿ ಒಂದೇ ಒಂದು ಸತ್ಯವನ್ನು ಜನರಿಗೆ ಹೇಳಿಲ್ಲ.ಅವರ ಹೇಳಿಕೆಯಲ್ಲಿ ಸಾಕಷ್ಟು ದ್ವಂದ್ವ ಇದೆ ಎಂದರು.
ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಮೋದಿಯವರ ಪಕ್ಕ ಇರುವವರು ಹೇಳುತ್ತಾ ಇದ್ದಾರೆ. ಮೋದಿಯವರ ಸರ್ಕಾರಕ್ಕೆ ಆರ್ಥಿಕ ಸಲಹೆಗಾರರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಹೇಳುತ್ತಾರೆ. ಸಂವಿಧಾನವನ್ನು ಸಂಪೂರ್ಣವಾಗಿ ಓದಿದವರು ಮೋದಿಯವರ ರೀತಿಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದವರು ನುಡಿದರು.
ನಾಗಪುರದಲ್ಲಿರುವ `ಸೂತ್ರ’ ಧೂರರು ಸಂವಿಧಾನದ ಬದಲಾವಣೆಯನ್ನು ಮೌನವಾಗಿ ಮಾಡೋಣ ಬಹಿರಂಗವಾಗಿ ಬೇಡ ಎಂದು ಹೇಳಿಕೆ ನೀಡುತ್ತಾ ಇದ್ದಾರೆ ಎಂದವರು ನುಡಿದರು.