ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನು ಭೇಟಿಯಾಗಿದ್ದರು ಎಂದು ಹೇಳಲಿ
ಕಲಬುರಗಿ,ಮೇ.5-ಕೆಲವು ತಿಂಗಳ ಹಿಂದೆ ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನು ಭೇಟಿಯಾಗಿದ್ದರು ಎಂದು ಹೇಳಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ತಾಲಿಬಾನ್ ಸರ್ಕಾರವಿದೆ ಎನ್ನುವ ಉಮೇಶ್ ಜಾಧವ್ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ನಾಯಕರು ಕೋಟನೂರು ಹಾಗೂ ಲಾಡ್‍ಮುಗಳಿ ಪ್ರಕರಣಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ” ಈ ಹಿಂದಿನ ಚುನಾವಣೆಯಲ್ಲಿ ಯಾರನ್ನು ಬಳಸಿಕೊಂಡು ಜಾಧವ್ ಚುನಾವಣೆ ನಡೆಸಿದ್ದಾರೆ ಎಂದು ಗೊತ್ತಿದೆ. ಸ್ವತಃ ಅವರ ಪಕ್ಷದ ಅಭ್ಯರ್ಥಿ ಯಾಗಿದ್ದವರೇ ಈಗ ವಿದೇಶಕ್ಕೆ ಹೋಗಿದ್ದಾರೆ. ಕಲಬುರಗಿಯಲ್ಲಿ ತಾಲೀಬಾನ್ ಆಡಳಿತವಿದ್ದರೇ ಜಾಧವ್ ಮಾತನಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ರೇವಣ್ಣ ಅರೆಸ್ಟ್ ಆಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ರೇವಣ್ಣ ವಿರುದ್ದ ಎರಡು ಕೇಸ್‍ಗಳು ದಾಖಲಾಗಿವೆ. ಎಸ್‍ಐಟಿ ಈಗಾಗಲೇ ತನಿಖೆ ಆರಂಭಿಸಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಪ್ರಕರಣದಿಂದಾಗಿ ರಾಜಕಾರಣಿಗಳು ತಲೆ ತಗ್ಗಿಸುವಂತಾಗಿದ್ದು, ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಜನರಲ್ಲಿ ಜಿಗುಪ್ಸೆ ಮೂಡಿದೆ ಎಂದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ನೀಡಿರುವ ಹೇಳಿಕೆಗೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, ಅಣ್ಣಾ ಮಲೈ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದವರು. ಕಾನೂನು ಪ್ರಕ್ರಿಯೆಯ ಬಗ್ಗೆ ಅವರಿಗೆ ಗೊತ್ತಿಲ್ಲವಾ ? ಅವರು ತಮಿಳುನಾಡಿಗೆ ಹೋಗಿದ್ದೆ ಒಳ್ಳೆಯದು ಆಯಿತು. ಇಲ್ಲದಿದ್ದರೆ ಒಬ್ಬ ಅಸಮರ್ಥ ಐಪಿಎಸ್ ಅಧಿಕಾರಿ ರಾಜ್ಯದಲ್ಲಿ ಇರುವಂತಾಗುತ್ತಿತ್ತು ಎಂದು ತಿರುಗೇಟು ನೀಡಿದರು.
ಹಾಸನ ಮಹಿಳೆಯರ ಲೈಂಗಿಕ ಶೋಷಣೆಯ ತನಿಖೆಯನ್ನು ಎಸ್‍ಐಟಿಗೆ ವಹಿಸಿರುವ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಈ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ಬದಲು ಎನ್‍ಜಿಓಗೆ ಕೊಡಬೇಕಿತ್ತಾ ? ಲಜ್ಜಗೆಟ್ಟ ಹಗರಣದ ಬಗ್ಗೆ ಮಾತನಾಡುವ ಬದಲು ಸರ್ಕಾರ ನೇಮಿಸಿದ ತನಿಖಾ ತಂಡದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ, ನಡ್ಡಾ, ಅಶೋಕ, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಹುಬ್ಬಳ್ಳಿ ಪ್ರಕರಣದಲ್ಲಿ ತೋರಿಸಿದಷ್ಟು ಆಸಕ್ತಿ ಹಾಸನ ಪ್ರಕರಣದಲ್ಲಿ ಯಾಕೆ ತೋರಿಸುತ್ತಿಲ್ಲ ? ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಬಗ್ಗೆ ಮೊದಲೇ ಗೊತ್ತಿದ್ದರೂ ಅವರಿಗೆ ಟಿಕೇಟ್ ನೀಡಿ ಅವರ ಪರ ಪ್ರಚಾರ ಕೈಗೊಂಡಿದ್ದರು. ಎಲ್ಲದಕ್ಕೂ ಮಾತನಾಡುವ ಮೋದಿ ಈ ವಿಚಾರದಲ್ಲಿ ಮೌನ ವಹಿಸಿದ್ದು ಯಾಕೆ ? ಪ್ರಜ್ವಲ್ ಬಂಧನಕ್ಕೆ ಬ್ಲೂ ನೋಟಿಸು ಜಾರಿ ಮಾಡಲಾಗಿದೆ. ಅವರ ಬಂಧನ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು ಇಲ್ಲವಾ ? ಎಂದು ಪ್ರಶ್ನಿಸಿದರು.
ನನ್ನ ವಿದ್ಯಾಭ್ಯಾಸದ ಬಗ್ಗೆ ಬಿಜೆಪಿಯರು ಪಶ್ನೆ ಮಾಡಿದ್ದಾರೆ. ನಾನು ಪ್ರಧಾನಿ ಮೋದಿ ಅವರ ವಿಧ್ಯಾಬ್ಯಾಸದ ಬಗ್ಗೆ ಕೇಳಿದ್ದೇನೆ ಅಷ್ಟೇ. ಇದೇನು ಗಂಭೀರ ವಿಷಯವೇ ? ಅಥವಾ ರಾಷ್ಟ್ರದ ಭದ್ರತೆಗೆ ಧಕ್ಕೆಯಾಗಲಿದೆಯಾ ? ಎಂದು ಪ್ರಶ್ನಿಸಿದರು.
ಗುಜರಾತ್‍ನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿಗರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ಧರ್ಮದ ಆಧಾರದ ಮೇಲೆ ಅವರು ಚುನಾವಣೆ ಎದುರಿಸುತ್ತಿದ್ದಾರೆ. ನಾವು ಅಭಿವೃದ್ದಿಯ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಟೀಕಿಸಿದರು.