ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಲಿಸಮಾಜದೊಂದಿಗೆ ಇರುತ್ತೇನೆ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ,ಮೇ 5: ಕೋಲಿ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಹಳ ವರ್ಷದಿಂದಲೇ ಇದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಎಷ್ಟೇ ಕಷ್ಟವಾದರೂ ಕೂಡಾ ನಾನು ನಿಮ್ಮ ಜೊತೆಯಲ್ಲಿರುತ್ತೇನೆ. ಕಾನೂನು ಪ್ರಕಾರ ನೀವು ಏನು ಹೇಳುತ್ತೀರಿ ಅದನ್ನು ಮಾಡುತ್ತೇನೆ. ನಾನು ರಾಜ್ಯಸಭಾ ಸದಸ್ಯನಾಗಿರುವುದಿಂದ ಇತರೆ ಸದಸ್ಯರಿಗೆ ಒಪ್ಪಿಸುವ ಕೆಲಸ ಮಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅಭಯ ನೀಡಿದರು
ಕಲಬುರಗಿ ನಗರದ ಎನ್ ವಿ ಕಾಲೇಜು ಮೈದಾನದಲ್ಲಿ ನಡೆದ ಕೋಲಿ ಕಬ್ಬಲಿಗ ಸಮಾಜ ಏರ್ಪಡಿಸಿದ ಸಭೆಯಲ್ಲಿ ಅವರು ಮಾತನಾಡಿದರು.
ತಮ್ಮ ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಗುರುಮಠಕಲ್ ಜನರನ್ನು ನೆನಪಿಸಿಕೊಂಡ ಖರ್ಗೆನಾನು ಬೇರೆಯವರಂತೆ ಸುಳ್ಳು ಹೇಳುವುದಿಲ್ಲ. ನಾನು ಮಾಡುವುದನ್ನೇ ಹೇಳುತ್ತೇನೆ. ಭ್ರಷ್ಟಾಚಾರ ಮಾಡಿ ದುಡ್ಡು ತಿಂದಿಲ್ಲ. ಹಾಗೆ ಮಾಡಿದ್ದರೆ ಜನರು 50 ವರ್ಷಗಳಿಂದ ನನ್ನನ್ನು ರಾಜಕೀಯದಲ್ಲಿ ಇಡುತ್ತಿರಲಿಲ್ಲ ಎಂದು ಹೇಳಿದರು.
ಸಂವಿಧಾನ ಬದಲಿಸುವ ಹುನ್ನಾರ.
ದೇಶದ ಸಂವಿಧಾನ ಬದಲಾಯಿಸುವ ಬಿಜೆಪಿಯ ಹುನ್ನಾರ ಅದೇ ಪಕ್ಷದ ಸಂಸದ ಹಾಗೂ ಶಾಸಕರ ಮಾತುಗಳಲ್ಲಿ ವ್ಯಕ್ತವಾಗಿದೆ. ಹಾಗಾಗಿ ಅವರಿಗೆ 2/3 ಮೆಜಾರಿಟಿ ಕೊಟ್ಟರೆ ಈ ದೇಶದಲ್ಲಿ ಸಂವಿಧಾನ ಉಳಿಯುವುದಿಲ್ಲ ಅದಕ್ಕೆ ನೀವು ಆಸ್ಪದ ನೀಡಬಾರದು ಎಂದು ಖರ್ಗೆ ಎಚ್ಚರಿಸಿದರು.
ಈ ದೇಶದ ಅಖಂಡತೆಗೆ ಧಕ್ಕೆ ತರಲು ಬಿಜೆಪಿ ಹಾಗೂ ಆರ್‍ಎಸ್‍ಎಸ್ ನಾಯಕರು ಪ್ರಯತ್ನಿಸುತ್ತಿದ್ದು, ಜನರು ಸಂವಿಧಾನ ರಕ್ಷಿಸುವ ದೇಶದ ಒಗ್ಗಟ್ಟು ಉಳಿಸಿಕೊಂಡು ಹೋಗುವ ಪಕ್ಷಕ್ಕೆ ಮತ ನೀಡಬೇಕು ಎಂದು ಕರೆನೀಡಿದ ಅವರು ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕಾರ್ಮಿಕರು, ರೈತರು, ಮಹಿಳೆಯರು, ಬಡವರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ನಾವು ಪ್ರಶ್ನಿಸಿದರೆ ನಮ್ಮನ್ನು ಸದನದಿಂದ ಹೊರಗೆ ಹಾಕಿ ಕಾನೂನುಗಳನ್ನು ರೂಪಿಸುತ್ತಾರೆ ಎಂದು ಆಕ್ಷೇಪಿಸಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371(ಜೆ) ಜಾರಿಗೊಳಿಸಲು ಪಟ್ಟ ಕಷ್ಟಗಳನ್ನು ಜನರೆದುರು ಬಿಚ್ಚಿಟ್ಟ ಖರ್ಗೆ, 2009 ರ ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷದ ಒಳಗಾಗಿಯೇ ಎಲ್ಲ ಪಕ್ಷದ ಸಹಕಾರ ಹಾಗೂ ಬೆಂಬಲದಿಂದಾಗಿ ಆರ್ಟಿಕಲ್ 371 (ಜೆ) ಜಾರಿಗೊಳಿಸಲಾಯಿತು. ಈ ಮಹತ್ತರ ಅವಕಾಶ ದಕ್ಕಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಾ ಸಂಸದ ಬಸವರಾಜ ಪಾಟೀಲ ಸೇಡಂ, ಖರ್ಗೆ ಅವರು ಇಲ್ಲದಿದ್ದರೆ ಆರ್ಟಿಕಲ್ 371(ಜೆ) ಜಾರಿಯಾಗುತ್ತಿರಲಿಲ್ಲ ಎಂದಿದ್ದರು. ಆದರೂ ಕೂಡಾ ನಾನು ಇದನ್ನು ನಾನು ಎಲ್ಲಿಯೂ ಹೇಳಿಲ್ಲ. ಇದಕ್ಕೆಲ್ಲಾ ನೀವೆ ಕಾರಣ ನೀವೇ ನನ್ನನ್ನು ಆರಿಸಿ ಕಳಿಸಿರದಿದ್ದರೆ ಇದು ಸಾಧ್ಯವಾಗುತ್ತಿಲ್ಲ. ನಾವು ಮಾಡುವ ಕೆಲಸವನ್ನು ನಾವು ಹೇಳಬಾರದು ಅದನ್ನು ಬೇರೆಯವರು ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಅಸೂಯೆ ಇದ್ದರೆ ಅಭಿವೃದ್ದಿಗೆ ಕುಂಠಿತವಾಗಲಿದೆ ಎಂದ ಅಭಿಪ್ರಾಯಪಟ್ಟ ಖರ್ಗೆ ಆರ್ಟಿಕಲ್ 371(ಜೆ) ಪ್ರಕಾರ ಈ ಭಾಗದ ಎಲ್ಲರಿಗೆ ಅನುಕೂಲವಾಗಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಮತ್ತು ಅಭಿವೃದ್ದಿಗಾಗಿ ರೂ 5000 ಕೋಟಿ ವಿಶೇಷ ಅನುದಾನ ಇದರಿಂದ ದೊರಕಲಿದೆ. ಆದರೂ ಕೂಡಾ ನಮ್ಮ ಜನರು ಸಹಕಾರದಿಂದ ಇರದೇ ಪರಸ್ಪರ ಜಗಳವಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಗ್ಯಾರಂಟಿ ಯೋಜನೆಗಳು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿಸಿದ ಮಲ್ಲಿಕಾರ್ಜುನ ಖರ್ಗೆ, ಶಕ್ತಿ ಯೋಜನೆಯಡಿಯಲ್ಲಿ ಇದೂವರೆಗೆ 200 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರಿಗೆ ತಲುಪಿವೆ. ಇದೇ ತರ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾರಿ ನ್ಯಾಯ, ರೈತನ್ಯಾಯ, ಯುವನ್ಯಾಯ, ಕಾರ್ಮಿಕನ್ಯಾಯ, ಜಾತಿ ಜನಗಣತೆ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ತಮಗೆ ಜೀವನದಲ್ಲಿ ಯಾವುದೇ ಆಸೆಗಳಿಲ್ಲ.ಕೋಲಿ ಸಮಾಜವನ್ನು ಎಸ್‍ಟಿ ಗೆ ಸೇರಿಸುವುದನ್ನು ನಾನು ನೋಡಬೇಕು ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುವ ಅವಕಾಶ ಒದಗಿ ಬರಲಿದೆ.ಆಗ ನಮ್ಮ ಸಮಾಜದ ಬೇಡಿಕೆ ಈಡೇರಲಿದೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಕು ಎಂದು ಮನವಿ ಮಾಡಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಶಿವಣ್ಣ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ರಾಜಗೋಪಾಲರೆಡ್ಡಿ ಮುದಿರಾಜ, ಭೀಮಣ್ಣ ಸಾಲಿ , ಜಯಪ್ರಕಾಶ ಕಮಕನೂರು ಸೇರಿದಂತೆ ಹಲವರಿದ್ದರು.