ಮತದಾನ ಮಹತ್ವ ಕುರಿತು ಜಾಗೃತಿ
ಭಾಲ್ಕಿ:ಮೇ.5: ತಾಲೂಕಿನ ಭಾತಂಬ್ರಾ ಗ್ರಾಮದ ಐತಿಹಾಸಿಕ ಕೋಟೆ ಬಳಿ ನರೇಗಾ ಕೆಲಸದ ಸ್ಥಳದಲ್ಲಿ ಶನಿವಾರ ಮತದಾನ ಮಹತ್ವ ಕುರಿತು ವಿನೂತನ ರೀತಿಯ ಜಾಗೃತಿ ಚಟುವಟಿಕೆಗಳನ್ನು ನಡೆಸಲಾಯಿತು.
ನರೇಗಾ ಕೂಲಿ ಕಾರ್ಮಿಕರು ಮತದಾನದ ಘೋಷ ವಾಕ್ಯಗಳ ದೊಡ್ಡ ದೊಡ್ಡ ರಂಗೋಲಿ ಬಿಡಿಸಿದರು. ನೂರಾರು ಕಾರ್ಮಿಕರು ಸ್ವೀಪ್ ಮಾದರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಭ್ರಮಿಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಹಣಮಂತರಾಯ ಕೌಟಗೆ ಅವರು ಕಾರ್ಮಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿ, ಮತದಾನ ಎಂಬುದು ಪವಿತ್ರವಾದ ಕರ್ತವ್ಯ ಹಾಗೂ ರಾಷ್ಟ್ರೀಯ ಹೊಣೆಗಾರಿಕೆ. ಅದನ್ನು ಎಲ್ಲರೂ ತಪ್ಪದೇ ನಿಭಾಯಿಸಬೇಕು ಎಂದು ಕೋರಿದರು.
ಕೆಲಸ ಅರಸಿಕೊಂಡು ಮಾಹಾನಗರಗಳಿಗೆ ವಲಸೆ ಹೋಗಿರುವ ತಮ್ಮ ಬಂಧು ಬಾಂಧವರನ್ನು ಕರೆಸಿಕೊಂಡು ಮತದಾನ ಮಾಡಿಸುವಂತೆ ತಿಳಿಸಿದರು.
ಸಹಾಯಕ ನಿರ್ದೇಶಕ (ನರೇಗಾ) ಜಗದೀಶಕುಮಾರ ಮಮದಾಪೂರೆ ಅವರು ಎಲ್ಲರನ್ನೂ ಸ್ವಾಗತಿಸಿ, ಉತ್ತಮ ರೀತಿಯ ಚಟುವಟಿಕೆ ಕೈಗೊಂಡಿದಕ್ಕಾಗಿ ಅಭಿನಂದಿಸಿದರು.
ಪಂಚಾಯತ ಅಭಿವೃದ್ದಿ ಅಧಿಕಾರಿ ಬಲಭೀಮ, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ತಾಂತ್ರಿಕ ಸಹಾಯಕ ಇಸ್ಮಾಯಿಲ, ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು.